ರಾಮನಗರ:ಕ್ಯಾಂಟರ್ ವಾಹನದಲ್ಲಿಜಾನುವಾರು ಸಾಗಿಸುತ್ತಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಬಳಿ ನಡೆದಿದೆ. ಇದ್ರೀಸ್ ಪಾಷ (35) ಮೃತ ವ್ಯಕ್ತಿ. ಇವರು ಕ್ಯಾಂಟರ್ ಚಾಲಕರಾಗಿದ್ದು, ಜಾನುವಾರು ಸಾಗಿಸುವ ವೇಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಜಾನುವಾರು ಸಾಗಿಸುವ ವೇಳೆ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಪುನೀತ್ ಕೆರೆಹಳ್ಳಿ ಮತ್ತು ಸಹಚರರು ವಾಹನ ತಡೆದಿದ್ದರು. ಈ ವೇಳೆ ವಾಹನ ಚಾಲಕ ಇದ್ರೀಸ್ ಪಾಷ ವಾಹನದಿಂದ ಇಳಿದು ಓಡಿ ಹೋಗಿದ್ದರು. ಆ ಬಳಿಕ ಸ್ವಲ್ಪ ದೂರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಜಾನುವಾರು ಖರೀದಿಸಿ ತೆರಳುತ್ತಿದ್ದಾಗ ಪುನೀತ್ ಕೆರೆಹಳ್ಳಿ ಮತ್ತು ಸಹಚರರು, ವಾಹನ ತಡೆದಿದ್ದರು. ಈ ವೇಳೆ ಕಾನೂನುಬದ್ಧವಾಗಿ ಜಾನುವಾರು ಖರೀದಿಸಿದ ಪೇಪರ್ಗಳನ್ನು ಇದ್ರೀಸ್ ಪಾಷ ತೋರಿಸಿದ್ದರು. ಆದರೆ ಈ ವೇಳೆ ಇದ್ರೀಸ್ ಪಾಷ ವಾಹನದಿಂದ ಸ್ವಲ್ಪ ದೂರ ಓಡಿ ಹೋದರೂ ಬಿಡದೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿ ದೂರು ನೀಡಿದ್ದಾರೆ.
ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತನ ಕುಟುಂಬಸ್ಥರು ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮೇಲೆ ಕೊಲೆ ಆರೋಪ ಮಾಡಿ, ಸಾತನೂರು ಪೊಲೀಸ್ ಠಾಣೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಾತನೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸಾತನೂರು ಠಾಣೆಯಲ್ಲಿ ದೂರು ದಾಖಲು:ಪುನೀತ್ ಕೆರೆಹಳ್ಳಿ ಹಾಗೂ ಇತರರ ವಿರುದ್ಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 341, 504, 506, 324, 302, 34 ರ ಅಡಿ ಪ್ರಕರಣ ದಾಖಲಾಗಿದೆ. ಏ1ರ ರಾತ್ರಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು.
ಇದ್ರೀಸ್ ಪಾಷ ಸಾವಿನ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಶೀಘ್ರವೇ ಪುನೀತ್ ಕೆರೆಹಳ್ಳಿ ಬಂಧಿಸಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ರೈಸ್ ಪುಲ್ಲಿಂಗ್ ದಂಧೆಯ ಶಂಕಿತ ಆರೋಪಿಯಿಂದ ಸುಲಿಗೆ; ಪುಲಿಕೇಶಿ ನಗರ ಠಾಣೆಯ ಮತ್ತಿಬ್ಬರು ಕಾನ್ಸ್ಟೇಬಲ್ಸ್ ಅಮಾನತು