ರಾಮನಗರ: ನಾವು ಪೊಲೀಸರು ಎಂದು ವಾಹನ ನಿಲ್ಲಿಸಿ ನಿಮ್ಮ ಡಿಎಲ್ ಕೊಡಿ ಅಂತಾ ಸಾರ್ವಜನಿಕರನ್ನು ಬೆದರಿಸಿ ಹೆದ್ದಾರಿಯಲ್ಲಿ ಹಗಲು ದರೋಡೆ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
ಹೆದ್ದಾರಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ನಾವು ಪೊಲೀಸರೆಂದು ಹೇಳಿಕೊಂಡು ಜನರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಆರೋಪಿಗಳೀಗ ಅಸಲಿ ಪೊಲೀಸರ ಅತಿಥಿಗಳಾಗಿದ್ದಾರೆ.
ರಾಮನಗರ ಜಿಲ್ಲೆಯ ಕುದೂರು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಮೂಲದ ರಾಜೇಶ್(33), ಚೇತನ್(35), ಪುನೀತ್ ಕುಮಾರ್(24) ಹಾಗೂ ಶ್ರೀನಿವಾಸ್(24) ಬಂಧಿತ ಆರೋಪಿಗಳಾಗಿದ್ದಾರೆ.
ಈ ನಕಲಿ ಪೊಲೀಸರು ಬಿಡದಿ, ಕುದೂರು ಭಾಗದಲ್ಲಿ ಓಡಾಡುವ ಜನರಿಂದ ಹಣ ವಸೂಲಿ ಮಾಡುತ್ತಿದ್ದರು. ಈ ಕಳ್ಳರು ಕದ್ದ ಇನೋವಾ ಕಾರಿನಲ್ಲೇ ಕಳ್ಳತನ ಹಾಗೂ ಸುಲಿಗೆ ಮಾಡುತ್ತಿದ್ದರು. ಹೆದ್ದಾರಿಗಳಲ್ಲಿ ಒಬ್ಬೊಂಟಿಯಾಗಿ ಓಡಾಡುವ ಜನರನ್ನೇ ಟಾರ್ಗೆಟ್ ಮಾಡುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಮುನಾವರ್ ಫಾರೂಕಿ ಸ್ಟ್ಯಾಂಡ್ ಅಪ್ ಕಾಮಿಡಿ ಶೋ ರದ್ದು
ಈ ಗ್ಯಾಂಗ್ ನಡೆ ಬಗ್ಗೆ ಅನುಮಾನಗೊಂಡು ಬೆನ್ನು ಹತ್ತಿದ್ದ ಪೊಲೀಸರಿಗೆ ಕುಣಿಗಲ್ ಟೋಲ್ ಬಳಿ ಕಾರು ಪತ್ತೆಯಾಗಿದೆ. ಟೋಲ್ ಬಳಿ ರಾಜೇಶ್ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು, ತೀವ್ರ ವಿಚಾರಣೆ ನಡೆಸಿ ಉಳಿದ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.