ರಾಮನಗರ: ರಾಜ್ಯ ಕಾಂಗ್ರೆಸ್ ನಾಯಕರು ಮೇಕೆದಾಟಿನಿಂದ ಆರಂಭಿಸಿರುವ ಪಾದಯಾತ್ರೆ ಮೂರನೇ ದಿನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಅಪಾರ ಸಂಖ್ಯೆಯ ಬೆಂಬಲಿಗರ ಉತ್ಸಾಹದ ನಡಿಗೆ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ಗೆ ಮಂಗಳವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಸಾಥ್ ನೀಡುವ ಮೂಲಕ ಪಾದಯಾತ್ರೆಗೆ ವಿಶೇಷ ಮೆರುಗು ತಂದರು. ಅನಾರೋಗ್ಯದ ಹಿನ್ನೆಲೆ ಮೇಕೆದಾಟು ಪಾದಯಾತ್ರೆಯ ಮೊದಲ ದಿನವೇ ಅರ್ಧಕ್ಕೆ ತಮ್ಮ ಪ್ರಯಾಣ ಮೊಟಕುಗೊಳಿಸಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಸಿದ್ದರಾಮಯ್ಯ ಅವರು ಒಂದು ದಿನದ ನಂತರ ಪಾದಯಾತ್ರೆಯಲ್ಲಿ ಮರು ಸೇರ್ಪಡೆಗೊಂಡಿದ್ದಾರೆ.
ತೆರಳಿದ ಕಡೆಗಳಲ್ಲೆಲ್ಲ ಕಾಂಗ್ರೆಸ್ ನಾಯಕರಿಗೆ ಜನರಿಂದ ಅಭೂತಪೂರ್ವ ಬೆಂಬಲ ದೊರಕುತ್ತಿದೆ. ಆದ್ರೆ ಕೋವಿಡ್ ನಿಯಮಾವಳಿಗಳ ಪಾಲನೆ ಮಾತ್ರ ಎಲ್ಲಿಯೂ ಕಂಡುಬರುತ್ತಿಲ್ಲ. ಸ್ವತಃ ರಾಜ್ಯ ಕಾಂಗ್ರೆಸ್ ನಾಯಕರು ಮಾಸ್ಕ್ ಧರಿಸದೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕರ್ತರಂತೆ ಯಾವುದೇ ರೀತಿಯಲ್ಲೂ ಸಾಮಾಜಿಕ ಅಂತರ ಅಥವಾ ಮಾಸ್ಕ್ ಧರಿಸುವ ಕಾರ್ಯಕ್ಕೆ ಒತ್ತು ಕೊಟ್ಟಿಲ್ಲ. ಸೋಮವಾರ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಡಿಕೆಶಿ ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದರು. ಇಂದು ಕಾಲೇಜು ವಿದ್ಯಾರ್ಥಿಗಳು ಪಾದಯಾತ್ರೆಗೆ ಬೆಂಬಲಿಸಿ ಕಾಂಗ್ರೆಸ್ ನಾಯಕರ ಜೊತೆ ಹೆಜ್ಜೆ ಹಾಕಿದ್ದಾರೆ.
ರಾಜ್ಯ ಸರ್ಕಾರ ನಿಯಮಾವಳಿಗಳನ್ನು ಮುಂದಿಟ್ಟು ಮೊದಲ ದಿನ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಮುಖಂಡರ ವಿರುದ್ಧ ಎಫ್ಐಆರ್ ದಾಖಲಿಸಿದೆ. ಒಂದೊಮ್ಮೆ ನಾವು ಪಾಲ್ಗೊಂಡರೆ ನಮ್ಮ ವಿರುದ್ಧವೂ ಎಫ್ಐಆರ್ ದಾಖಲಾಗಬಹುದು ಎಂಬ ಆತಂಕಕ್ಕೆ ಸಾಕಷ್ಟು ಮಂದಿ ಆಸಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಆಸಕ್ತಿ ಇದ್ದರೂ ಇತ್ತ ಸುಳಿಯುತ್ತಿಲ್ಲ. ಸರ್ಕಾರದ ನಿಯಮಾವಳಿ ಕಾಂಗ್ರೆಸ್ ಪಾದಯಾತ್ರೆಗೆ ಒಂದು ರೀತಿಯಲ್ಲಿ ತಡೆ ಉಂಟು ಮಾಡುತ್ತಿದೆ.