ರಾಮನಗರ:ರೇಷ್ಮೆನಗರಿ ರಾಮನಗರ ಜಿಲ್ಲೆಯ ಎಲ್ಲ ಕ್ಷೇತ್ರಗಳ ನಿರೀಕ್ಷೆಯಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಹೆಸರುಗಳನ್ನು ಬಹುತೇಕ ಫಿಕ್ಸ್ ಆಗಿದೆ. ಜಿಲ್ಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ಸಿ.ಪಿ.ಯೋಗೇಶ್ವರ್, ಹೆಚ್.ಸಿ.ಬಾಲಕೃಷ್ಣ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಘಟಾನುಘಟಿ ರಾಜಕಾರಣಿಗಳ ಭವಿಷ್ಯ ನಿರ್ಧಾರಕ್ಕೆ ವೇದಿಕೆ ಸಜ್ಜಾಗುತ್ತಿದೆ. ಈ ಭಾರಿ ಜಿಲ್ಲೆಯಲ್ಲಿ ಪ್ರಮುಖವಾಗಿ ಮೂರು ಪಕ್ಷಗಳು ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ v/s ಯೋಗೇಶ್ವರ್: ಚನ್ನಪಟ್ಟಣದಿಂದ ಬಿಜೆಪಿ ಅಭ್ಯರ್ಥಿ ಆಗಲಿರುವ ಸಿ.ಪಿ. ಯೋಗೇಶ್ವರ್ ಏಳನೇ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯೋಗೇಶ್ವರ್ 2011ರ ಉಪ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು.
2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹೆಚ್.ಡಿ. ಕುಮಾರಸ್ವಾಮಿ ಎದುರು ಪರಾಭವಗೊಂಡಿದ್ದರು. ಈ ಬಾರಿ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ವದಂತಿ ಸಹ ಹಬ್ಬಿತ್ತು. ಅಂತಿಮವಾಗಿ ಕಮಲ ಚಿಹ್ನೆಯಿಂದಲೇ ಸಿಪಿವೈ ಸ್ಪರ್ಧೆ ಖಚಿತವಾಗಿದೆ. ಸ್ವಾಭಿಮಾನಿ ಸಂಕಲ್ಪ ನಡಿಗೆ ಯಾತ್ರೆ ಮೂಲಕ ಈಗಾಗಲೇ ಅವರು ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ.
ಮತ್ತೊಂದೆಡೆ ಇವರ ಪ್ರತಿ ಸ್ಪರ್ದಿಯಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪೈಪೋಟಿ ನೀಡಲು ಸಿದ್ದರಾಗಿದ್ದಾರೆ. ಕಳೆದ ಭಾರಿ ಚುನಾವಣೆಯಲ್ಲಿ 20 ಸಾವಿರಕ್ಕೂ ಹೆಚ್ಚು ಲೀಡ್ ಮತ ಪಡೆದು ಜಯಶೀಲರಾಗಿದ್ದರು. ನಂತರ ಈ ಕ್ಷೇತ್ರದಿಂದ ಗೆದ್ದು 14 ತಿಂಗಳ ಕಾಲ ರಾಜ್ಯದ ಸಿಎಂ ಆಗಿದ್ದರು. ಈಗ ಮತ್ತೊಮ್ಮೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ.
ಕಳೆದ ಬಾರಿ ಚುನಾವಣೆಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ಎರಡೂ ಕ್ಷೇತ್ರದಿಂದಲೂ ಸ್ಪರ್ಧಿಸಿ ಎರಡೂ ಕ್ಷೇತ್ರದಿಂದಲೂ ಗೆದ್ದಿದ್ದರು. ಆದರೆ, ಈ ಭಾರಿ ಕೇವಲ ಚನ್ನಪಟ್ಟಣ ಕ್ಷೇತ್ರದಿಂದ ಮಾತ್ರ ಸ್ಪರ್ಧೆ ಮಾಡೋದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿರುವ ಕ್ಷೇತ್ರದಲ್ಲಿ ಜೆಡಿಎಸ್ ಅಲೆ ಸ್ವಲ್ಪ ಹೆಚ್ಚಾಗಿಯೇ ಇದೆ ಎನ್ನಲಾಗುತ್ತಿದೆ.
ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಹುಡುಕಾಟ ಜೋರಾಗಿದೆ. ಸಂಭವನೀಯ ಅಭ್ಯರ್ಥಿ ಎಂದೆ ಕರೆಸಿಕೊಂಡಿದ್ದ ಪ್ರಸನ್ನ ಪಿ ಗೌಡ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದು, ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಗಂಗಾಧರ್ ರವರೇ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.
ಮಾಗಡಿ ಕ್ಷೇತ್ರದಲ್ಲಿ ಅಖಾಡ ಜೋರು - ಜೆಡಿಎಸ್ ಅಭ್ಯರ್ಥಿಯಾಗಿ ಎ.ಮಂಜುನಾಥ್:- ಮಾಗಡಿ ಕ್ಷೇತ್ರದಿಂದ ಮೂರು ಪಕ್ಷದಿಂದಲೂ ಕೂಡ ಅಭ್ಯರ್ಥಿಗಳು ಬಹುತೇಕ ಫಿಕ್ಸ್ ಆಗಿದ್ದಾರೆ. ಜೆಡಿಎಸ್ ಪಕ್ಷದಿಂದ ಹಾಲಿ ಶಾಸಕರಾದ ಎ.ಮಂಜುನಾಥ್ ರವರಿಗೆ ಈ ಭಾರಿ ಜೆಡಿಎಸ್ ಪಕ್ಷದಿಂದ ಟಿಕೆಟ್ ಖಾಯಂ ಆಗಿದೆ. ಕ್ಷೇತ್ರದಲ್ಲಿ ಶಾಸಕರಾಗಿದ್ದ ವೇಳೆ ಮಾಡಿದ ಅಭಿವೃದ್ಧಿ ಶ್ರೀರಕ್ಷೆಯೇ ಈ ಭಾರಿ ಗೆಲುವಿಗೆ ಕಾರಣ ಆಗಲಿದೆ ಎಂದು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಹೆಚ್.ಸಿ.ಬಾಲಕೃಷ್ಣ:- ಮತ್ತೊಂದೆಡೆ ಕಾಂಗ್ರೆಸ್ ಪಕ್ಷದಿಂದ ಹೆಚ್.ಸಿ.ಬಾಲಕೃಷ್ಣ ಐದನೇ ಬಾರಿಗೆ ಶಾಸಕರಾಗಲು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಕಳೆದ ಭಾರಿ ಕಾಂಗ್ರೆಸ್ ಪಕ್ಷದಿಂದ ನಿಂತು ಪರಾಜಯಗೊಂಡಿದ್ದರು. ಆದರೆ, ಈ ಭಾರಿ ಶತಾಯಗತಾಯ ಗೆದ್ದು ಬರಬೇಕೆಂದು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಕೆ.ಆರ್. ಪ್ರಸಾದ್ ಗೌಡ :- ಇದಲ್ಲದೇ ಕ್ಷೇತ್ರದ ಕಣಮಿಣಕಿ ಗ್ರಾಮದವರಾದ ಪ್ರಸಾದ್ ಗೌಡ ಈ ಬಾರಿ ಮಾಗಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಮಾಗಡಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಪ್ರಸಾದ್ ಗೌಡ, ಚುನಾವಣೆ ಘೋಷಣೆಗೂ ಮುನ್ನ ಬಡಜನರಿಗೆ ಉಚಿತ ನಿವೇಶನ ಹಂಚಿಕೆ, ಮಹಿಳೆಯರಿಗೆ ಮೂಗುತಿ, ಧಾರ್ಮಿಕ ಪ್ರವಾಸಗಳ ಆಯೋಜನೆ ಮೊದಲಾದ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದರು. ಪಕ್ಷದ ಟಿಕೆಟ್ ಖಾತ್ರಿಯಾಗುವ ಮುನ್ನವೇ ಕ್ಷೇತ್ರದಾದ್ಯಂತ ಪ್ರಚಾರ ನಡೆಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಆಪ್ತರಾಗಿದ್ದು, ಅದು ಸಹ ಅಭ್ಯರ್ಥಿ ಆಯ್ಕೆಯಲ್ಲಿ ಕೆಲಸ ಮಾಡಿದೆ. ಇವರು ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ರೇಷ್ಮೆನಗರಿ ನಗರಿ ಅಖಾಡ ಬಲು ಜೋರು:ರಾಮನಗರ ವಿಧಾನಸಭೆ ಕ್ಷೇತ್ರ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರವಾಗಿದೆ. ಈ ಭಾರಿ ಕ್ಷೇತ್ರದಲ್ಲಿ ಪ್ರಮುಖ ಮೂರು ಪಕ್ಷದಿಂದಲೂ ಅಭ್ಯರ್ಥಿಗಳು ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.
ಜೆಡಿಎಸ್ ಪಕ್ಷದಿಂದ ನಿಖಿಲ್ ಕುಮಾರಸ್ವಾಮಿ -ಜೆಡಿಎಸ್ ಭದ್ರ ಕೋಟೆ ಎಂದೆ ಕರೆಸಿಕೊಂಡಿರುವ ಈ ಕ್ಷೇತ್ರದಲ್ಲಿ ಮೊದಲ ಭಾರಿಗೆ ಶಾಸಕರಾಗಲು ಜೆಡಿಎಸ್ ಪಕ್ಷದಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸಜ್ಜಾಗಿದ್ದಾರೆ. ಹಾಲಿ ಇವರ ತಾಯಿ ಅನಿತಾ ಕುಮಾರಸ್ವಾಮಿರವರೇ ಕ್ಷೇತ್ರದ ಶಾಸಕರಾಗಿದ್ದು, ಮಗ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ರಾಮನಗರ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ. ಈಗಾಗಲೆ ಕ್ಷೇತ್ರದಾದ್ಯಂತ ನಿಖಿಲ್ ಕೂಡ ಭಾರಿ ಪ್ರಚಾರ ನಡೆಸುತ್ತಿದ್ದಾರೆ.