ರಾಮನಗರ:ತಾಲೂಕಿನ ಕೆಂಪಾಪುರ ಗ್ರಾಮದಲ್ಲಿರುವ ಮಾಗಡಿ ಕೆಂಪೇಗೌಡರ ಸಮಾಧಿ ಸ್ಥಳದ ಅಭಿವೃದ್ಧಿಗಾಗಿ ಇಲ್ಲಿಯವರೆಗೂ ಅಧಿಕಾರ ನಡೆಸಿದ ಸರ್ಕಾರಗಳು ಯಾವುದೇ ಯೋಜನೆ ಮಾಡಿಲ್ಲ. ನಮ್ಮ ಅವಧಿಯಲ್ಲಿ ಈ ಸ್ಥಳದ ಅಭಿವೃದ್ಧಿಗೆ ನೀಲನಕ್ಷೆ ತಯಾರಾಗುತ್ತಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಕೆಂಪಾಪುರದ ಕೆಂಪೇಗೌಡರ ಸಮಾಧಿ ಸ್ಥಳಕ್ಕೆ ಇಂದು ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಅವರು, ಐಡೆಕ್ ಹೆಸರಿನ ಸಂಸ್ಥೆಗೆ ಈ ಯೋಜನೆಯನ್ನ ಒಪ್ಪಿಸಲಾಗುತ್ತಿದೆ. ಅದಕ್ಕಾಗಿ 150 ಕೋಟಿ ರೂ. ಹಣ ಮಂಜೂರಾಗಿದೆ. ಇಡೀ ನಾಡೇ ನೋಡುವ ರೀತಿ ನಾವು ಈ ಕೆಲಸ ಮಾಡುತ್ತೇವೆ. ಕೆಂಪೇಗೌಡರ ಸಮಾಧಿ ಒಂದು ಐತಿಹಾಸಿಕ ತಾಣವಾಗಲಿದೆ ಎಂದರು.
ಇದೇ ವೇಳೆ ರಾಮನಗರ ನನ್ನ ಜಿಲ್ಲೆ. ಭಾವನಾತ್ಮಕವಾಗಿ ನನಗೆ ಸಂಬಂಧವಿದೆ. ನಾನು ಹೊರಗಿನಿಂದ ರಾಜಕೀಯವಾಗಿ ಬಳಸಿಕೊಳ್ಳಲು ಬಂದವನಲ್ಲ. ಜಿಲ್ಲೆಯ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ. ಜಿಲ್ಲೆಯಲ್ಲಿ ಸದ್ಯದಲ್ಲೇ ನನ್ನ ಕಚೇರಿ ಪ್ರಾರಂಭವಾಗಲಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.