ರಾಮನಗರ: ಡ್ರಗ್ಸ್ ಹಾಗೂ ಗಾಂಜಾ ವಿರುದ್ಧ ಸಮರ ಸಾರಿರುವ ಜಿಲ್ಲೆಯ ಪೊಲೀಸರು ಸುಮಾರು 20 ದಿನಗಳಲ್ಲಿ 133 ಕೆಜಿ ಗಾಂಜಾ ವಶಕ್ಕೆ ಪಡೆದು, ಆಂಧ್ರ ಪ್ರದೇಶ ಮೂಲದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೀನು ಸಾಗಾಣಿಕೆ ನೆಪದಲ್ಲಿ ಬಂದಿದ್ದ ಆರೋಪಿಯ ಹೆಡೆಮುರಿ ಕಟ್ಟಿ ನಂತರ ಉಳಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಗಾಂಜಾ ಪ್ರಕರಣಗಳಿಗೆ ವಿಶಾಖಪಟ್ಟಣದೊಂದಿಗೆ ನಂಟು ಇರುವುದು ಪೊಲೀಸರ ಕಾರ್ಯಾಚರಣೆಯಿಂದ ತಿಳಿದು ಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ರಾಜ್ಯ ಸರ್ಕಾರ ಡ್ರಗ್ಸ್ ಪ್ರಕರಣದ ವಿರುದ್ಧ ಸಮರ ಸಾರಿದ ಬೆನ್ನಲ್ಲೇ ಜಿಲ್ಲೆಯಲ್ಲಿಯೂ ದಂಧೆಕೋರರ ಬೆನ್ನಟ್ಟುವ ಕಾರ್ಯ ಆರಂಭಗೊಂಡಿದೆ. ಇದರ ಭಾಗವಾಗಿ ಮಾಗಡಿಯ ಮಂಚನಬೆಲೆ ಬಳಿ ಗಾಂಜಾ ಮಾರಾಟದ ಮಾಹಿತಿ ಪಡೆದ ಮಾಗಡಿ ಪೊಲೀಸರು, ಮೊದಲಿಗೆ ಆರೋಪಿ ಶಿವರಾಜ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಗಾಂಜಾ ಪೂರೈಕೆ ಮೂಲದ ಮಾಹಿತಿ ಕೊಡದ ಶಿವರಾಜ್, ನನ್ನನ್ನು ಬಿಟ್ಟುಬಿಡಿ ಎಂದು ಬೇಡಿಕೊಳ್ಳುತ್ತಾನೆ. ಅದನ್ನೇ ಬಂಡವಾಳ ಮಾಡಿಕೊಂಡ ಮಾಗಡಿ ವೃತ್ತ ನಿರೀಕ್ಷಕ ಬಿ.ಎಸ್.ಮಂಜುನಾಥ್ ಮತ್ತು ತಂಡ ನಿನ್ನನ್ನು ಬಿಡುತ್ತೇವೆ. ಆದರೆ ಪೂರೈಕೆಯಾಗುತ್ತಿರುವ ಮೂಲದ ಮಾಹಿತಿ ನೀಡು ಎಂದಿದ್ದಾರೆ. ಬಂಧಿತ ಆರೋಪಿ ಆಂಧ್ರ ಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ಬರುತ್ತಿದೆ ಎಂಬ ಮಾಹಿತಿ ಕೊಟ್ಟಿದ್ದಾನೆ.
ಪೊಲೀಸರು ವಿಶಾಖಪಟ್ಟಣಕ್ಕೆ ಹೋಗಿ ಆರೋಪಿಗಳನ್ನು ಬಂಧಿಸಲು ಯೋಜನೆ (ಗಾಂಜಾ ಖರೀದಿ ನೆಪದಲ್ಲಿ ಆರೋಪಿಗಳ ಬಂಧನ) ಹಾಕಿಕೊಂಡಿದ್ದರು. ಎಚ್ಚೆತ್ತುಕೊಂಡಿದ್ದ ಆರೋಪಿ ಪಾಂಗಿ ಪ್ರಸಾದ್, ನಿಮಗೆ ಗಾಂಜಾ ಕೊಡುವುದಿಲ್ಲ ಎಂದು ಹೇಳಿದ್ದಾನೆ. ಮೊದಲ ಪ್ರಯತ್ನದಲ್ಲಿ ಬರಿಗೈಯಲ್ಲಿ ಪೊಲೀಸರು ಮಾಗಡಿಗೆ ವಾಪಸಾದರು. ಧೃತಿಗೆಡದ ಪೊಲೀಸರು ಮತ್ತೊಂದು ಯೋಜನೆ ರೂಪಿಸಿ ಗಾಂಜಾ ಪೂರೈಕೆದಾರನ ವಿಶ್ವಾಸ ಗಳಿಸಲು ಮುಂದಾಗುತ್ತಾರೆ. ಆತನ ಬ್ಯಾಂಕ್ ಖಾತೆಗೆ ಹಣ ಹಾಕುವ ಮೂಲಕ ಖರೀದಿ ಮಾಡಲು ಮಾತುಕತೆ ಮಾಡಿಕೊಂಡರು. ಗಾಂಜಾ ಖರೀದಿಯ ನೆಪದಲ್ಲಿ ಪೊಲೀಸರನ್ನು ನಂಬಿದ ಪಾಂಗಿ ಪ್ರಸಾದ್ ಬರುವಂತೆ ಸೂಚನೆ ನೀಡಿದ್ದಾನೆ. ಇದರಿಂದ ಅಪಾಯ ಅರಿತ ಪೊಲೀಸರು, ನಮ್ಮಲ್ಲಿ ಒಬ್ಬನಿಗೆ ಕೊರೊನಾ ಬಂದಿದೆ. ನೀವೇ ತಂದುಕೊಡಿ ಎಂದು ಮನವಿ ಮಾಡುತ್ತಾರೆ. ಹಿಂದೆ ಮುಂದೆ ನೋಡದ ಪಾಂಗಿ ಪ್ರಸಾದ್ ನೇರವಾಗಿ ಮಾಗಡಿಗೆ ಗಾಂಜಾ ತಂದು ಕೊಡುವ ಭರವಸೆ ಕೊಡುತ್ತಾನೆ.
ಮೀನು ಸಾಗಾಣಿಕೆ ರೂಪದಲ್ಲಿ 60 ಕೆಜಿ ಗಾಂಜಾದೊಂದಿಗೆ ಮಾಗಡಿಗೆ ಬಂದಿದ್ದ ಆರೋಪಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಇವನ ಜೊತೆಗೆ ಉಳಿದ ಆರೋಪಿಗಳಾದ ಬೆಂಗಳೂರಿನ ಕುಪ್ಪ, ಶಿವರಾಜು, ಶಂಕರ್, ಮಂಜುನಾಥ್, ನವೀನ್, ಶರತ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.