ರಾಮನಗರ :ಕಳೆದ 15 ದಿನಗಳ ಅವಧಿಯಲ್ಲಿ ಅಕ್ರಮ ಗಾಂಜಾ ದಂಧೆಗಳ ಮೇಲೆ ಸರಣಿ ದಾಳಿ ನಡೆಸಿರುವ ಪೊಲೀಸರು ಸುಮಾರು 44 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಗಾಂಜಾ ಸೊಪ್ಪು ವಶಪಡಿಸಿಕೊಂಡಿದ್ದಾರೆ.
ಗಾಂಜಾ ದಂಧೆ ಮೇಲೆ ಸರಣಿ ದಾಳಿ ಇದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್, ಸೆ.4 ರಿಂದ ಸೆ.17 ರ ನಡುವಿನ ಅವಧಿಯಲ್ಲಿ 11 ಕಡೆ ದಾಳಿ ನಡೆಸಲಾಗಿದ್ದು, 22 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಕ್ರಮದಲ್ಲಿ ಭಾಗಿಯಾಗಿರುವ 15 ಮಂದಿಯನ್ನು ಬಂಧಿಸಿ ಅವರಿಂದ 133 ಕೆ.ಜಿ 740 ಗ್ರಾಂ ತೂಕದ 43.91.000 ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿರುವುದಾಗಿ ತಿಳಿಸಿದರು.
ಪ್ರಮುಖವಾಗಿ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ 5 ಪ್ರಕರಣ , ಮಾಗಡಿ ಪೊಲೀಸ್ ಠಾಣೆಯಲ್ಲಿ 4 ಪ್ರಕರಣ ಹಾಗೂ ಚನ್ನಪಟ್ಟಣದ ಪೂರ್ವ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ ದಾಖಲಾಗಿವೆ. ಇದರ ಜತೆಗೆ ಹೊರ ಜಿಲ್ಲೆಗಳಲ್ಲೂ ದಾಳಿ ಮಾಡಿ ಅಕ್ರಮ ಗಾಂಜಾ ಬೆಳೆಗಳನ್ನು ವಶಪಡಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ಮಾಹಿತಿ ನೀಡಿದರು.
ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಬೆಂಗಳೂರು ಡ್ರಗ್ಸ್ ಪ್ರಕರಣ ಬಹಿರಂಗವಾದ ಬೆನ್ನಲೇ ಎಚ್ಚೆತ್ತುಕೊಂಡಿರುವ ಪೊಲೀಸರು ಮಾದಕ ಜಾಲದ ವಿರುದ್ಧ ಸಮರ ಸಾರಿ ಸರಣಿ ದಾಳಿಗಳನ್ನು ಮಾಡುವ ಮೂಲಕ ಮಾದಕ ಜಾಲದ ಹೆಡೆಮುರಿ ಕಟ್ಟಿದ್ದಾರೆ. ಜಿಲ್ಲೆಯಲ್ಲಿ ಕಳೆದ ಐದು ವರ್ಷ ಅವಧಿಯಲ್ಲಿ 99 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದು, ಕೇವಲ 15 ದಿನಗಳ ಅವಧಿಯಲ್ಲಿ 133 ಕೆ.ಜಿ ಗಾಂಜಾ ವಶಪಡಿಸಿಕೊಂಡು ಮಾದಕ ಜಾಲದ ವಿರುದ್ಧ ಸಮರಕ್ಕೆ ಸಾಕ್ಷಿಯಾಗಿದ್ದಾರೆ.