ರಾಯಚೂರು :ಜಿಲ್ಲೆಯ ಮಾನವಿ ತಾಲೂಕಿನ ಕೋಳಿ ಕ್ಯಾಂಪ್ನಲ್ಲಿ ವಾಸಿಸುವ ಐದು ವರ್ಷದ ಬಾಲಕಿಗೆ ಶಂಕಿತ ಝಿಕಾ ವೈರಸ್ ಪತ್ತೆಯಾಗಿತ್ತು. ಈ ಶಂಕಿತ ಝಿಕಾ ವೈರಸ್ ಪತ್ತೆ ಹಿನ್ನೆಲೆಯಿಂದಾಗಿ ಕೋಳಿ ಕ್ಯಾಂಪ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಶಾ ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ಆಸ್ಪತ್ರೆಯ ಸಿಬ್ಬಂದಿ, ವೈದ್ಯರು ಗ್ರಾಮಗಳಲ್ಲಿನ ಪ್ರತಿ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸುತ್ತಿದ್ದಾರೆ. ಬಾಲಕಿಯ ಆರೋಗ್ಯದಲ್ಲಿ ಗುಣಮುಖ ಕಂಡಿದೆ.
52 ಜನರ ವಿಶೇಷ ತಂಡ ರಚನೆ:ಕಲ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವಂತಹ ಹರವಿ, ನೀರ ಮಾನವಿ, ಕೋಳಿಕ್ಯಾಂಪ್ನಲ್ಲಿ ಆರೋಗ್ಯ ಸಮೀಕ್ಷೆ ನಡೆಸಲಾಗುತ್ತಿದೆ. ಈ ಸಮೀಕ್ಷೆಗೆ 23 ಜನ ಹೆಚ್ ಐವಿ ತಂಡ, 23 ಜನ ಆಶಾ ಕಾರ್ಯಕರ್ತರು ಸೇರಿದಂತೆ ಒಟ್ಟು 52 ಜನರ ವಿಶೇಷವಾದ ತಂಡ ರಚನೆ ಮಾಡಲಾಗಿದೆ.
ಪ್ರತಿಯೊಂದು ಮನೆಗೆ ತೆರಳಿ ತಪಾಸಣೆ ಕಾರ್ಯ ನಡೆಸುವುದರ ಜತೆ ಕುಟುಂಬ ಸದಸ್ಯ ಸಂಖ್ಯೆ, ಆರೋಗ್ಯ ವಿಚಾರಣೆ ಹಾಗೂ ಸಾಂಕ್ರಾಮಿಕ ರೋಗ ಹರಡದಂತೆ, ಬಾರದಂತೆ ತಡೆಗಟ್ಟುವ ಕ್ರಮಗಳ ಕುರಿತಂತೆ ಜನರಿಗೆ ತಿಳಿ ಹೇಳುವಂತಹ ಕೆಲಸ ಮಾಡಲಾಗುತ್ತಿದೆ ಎಂದು ತಾಲೂಕು ಆರೋಗ್ಯ ಇಲಾಖೆಯ ಹೆಡ್ ಚಂದ್ರಶೇಖರ್ ತಿಳಿಸಿದರು.