ಕರ್ನಾಟಕ

karnataka

ETV Bharat / state

ವಿಶ್ವ ಏಡ್ಸ್ ದಿನ: ರಾಯಚೂರಲ್ಲಿ ಈ ವರ್ಷ ಪತ್ತೆಯಾದ ಹೆಚ್​ಐವಿ ಕೇಸ್​ಗಳೆಷ್ಟು? - ರಾಯಚೂರು ಏಡ್ಸ್ ಪ್ರಕರಣಗಳು

December 1 World AIDS Day 2023: ಸಮುದಾಯಗಳು ಮುನ್ನಡೆಸಲಿ ಎಂಬ ಘೋಷ ವಾಕ್ಯದೊಂದಿಗೆ ಈ ವರ್ಷ ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತಿದೆ.

World AIDS Day 2023
ವಿಶ್ವ ಏಡ್ಸ್ ದಿನ

By ETV Bharat Karnataka Team

Published : Dec 1, 2023, 9:56 AM IST

ರಾಯಚೂರು:ಡಿಸೆಂಬರ್ 1, ವಿಶ್ವ ಏಡ್ಸ್ ದಿನ. ಪ್ರತಿ ವರ್ಷ ಒಂದೊಂದು ಥೀಮ್​​ನಡಿ ಈ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. 'ಸಮುದಾಯಗಳು ಮುನ್ನಡೆಸಲಿ' (Let Communities lead) ಎನ್ನುವುದು ಈ ವರ್ಷದ ಏಡ್ಸ್ ದಿನದ ಘೋಷವಾಕ್ಯವಾಗಿದೆ. ಕೆಲ ವರ್ಷಗಳ ಹಿಂದೆ ವ್ಯಾಪಕವಾಗಿ ಹಬ್ಬಿದ್ದ ಮಾರಕ ರೋಗ ಇತ್ತೀಚೆಗೆ ನಿಯಂತ್ರಣಕ್ಕೆ ಬರುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ರೋಗಿಗಳ ಸಂಖ್ಯೆ ಇಳಿಮುಖವಾಗುತ್ತಿದೆ.

ರಾಯಚೂರಲ್ಲಿ ಕಳೆದ ವರ್ಷ ಅಂದ್ರೆ 2022ರಲ್ಲಿ 82,553 ಜನರನ್ನು ಪರೀಕ್ಷಿಸಿದಾಗ 404 ಜನರಲ್ಲಿ ಹಾಗೂ 58,191 ಗರ್ಭಿಣಿಯರನ್ನು ಪರೀಕ್ಷೆಗೊಳಪಡಿಸಿದಾಗ 20 ಗರ್ಭಿಣಿಯರಲ್ಲಿ ಹೆಚ್​ಐವಿ ಸೋಂಕು ಕಂಡುಬಂದಿತ್ತು. ಈ ವರ್ಷ 2023ರಲ್ಲಿ 46,731 ಜನರನ್ನು ಟೆಸ್ಟ್ ಮಾಡಿದಾಗ 251 ಜನರಲ್ಲಿ ಮತ್ತು 33,535 ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸಿದಾಗ 14 ಗರ್ಭಿಣಿಯರಲ್ಲಿ ಹೆಚ್​ಐವಿ ಸೋಂಕು ಪತ್ತೆಯಾಗಿದೆ. ಸೋಂಕು ಹೊಂದಿದ 34 ಗರ್ಭಿಣಿಯರಿಗೆ ಹೆರಿಗೆ ಆಗಿದ್ದು, ಯಾವುದೇ ಮಗುವಿಗೆ ಸೋಂಕು ಹರಡಿಲ್ಲ.

ಹೆಚ್​ಐವಿ ಸೋಂಕಿಗೆ ಜಾತಿ, ಲಿಂಗ, ವಯಸ್ಸಿನ ಬೇಧ ಭಾವವಿಲ್ಲ. ಜಾಗೃತಿವಹಿಸದಿದ್ದರೆ ಈ ಸೋಂಕು ಯಾರಿಗೆ ಬೇಕಾದರೂ ಹರಡುತ್ತದೆ. ಹೆಚ್‌ಐವಿ ರೋಗ ಲಕ್ಷಣಗಳು ಕಂಡುಬಂದಲ್ಲಿ ಪರೀಕ್ಷೆ ಮಾಡಿಸಿ ಜಾಗೃತರಾಗುವಂತೆ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಶಾಕೀರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 14 ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳಿವೆ. ಉಚಿತವಾಗಿ ಆಪ್ತಸಮಾಲೋಚನೆ ಹಾಗೂ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಐಸಿಟಿಸಿ/ಎಫ್​​ಐಸಿಟಿಸಿ ಕೇಂದ್ರಗಳಲ್ಲಿ ಉಚಿತವಾಗಿ ರಕ್ತ ಪರೀಕ್ಷೆ ಮಾಡಲಾಗುತ್ತದೆ. ಜೊತೆಗೆ ಖಾಸಗಿ ಸಹಭಾಗಿತ್ವದ 12 ಆಸ್ಪತ್ರೆಗಳಲ್ಲಿ ಹೆಚ್​ಐವಿ ಪರೀಕ್ಷಾ ಸೇವಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಶೂನ್ಯ ಸೋಂಕು ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಸರ್ಕಾರದಿಂದ ಆರೋಗ್ಯ ಸೇವೆಗಳು ಉಚಿತವಾಗಿದ್ದು, ಸಾರ್ವಜನಿಕರು ಇದರ ಲಾಭ ಪಡೆಯಬೇಕು. ಸೋಂಕಿತರು ತೆರೆಮರೆಯಲ್ಲಿರಬಾರದು. ಮೌನ ಮುರಿದು ಮಾತನಾಡಬೇಕು. ತಮ್ಮ ಆರೋಗ್ಯದ ಹಕ್ಕನ್ನು ಸದುಪಯೋಗಪಡಿಸಿಕೊಳ್ಳಬೇಕು. ಸೋಂಕಿತರ ಬದುಕಿಗೆ ಆಸರೆಯಾದ ಸಂಘ-ಸಂಸ್ಥೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿ ಅವರ ಬದುಕು ಸುಂದರವಾಗಿ ಅರಳಿಸಿಕೊಳ್ಳಲು ಸಹಕರಿಸಬೇಕು ಎಂದರು.

ಎಲ್ಲಾ ಇಲಾಖೆಯ ಮುಖ್ಯಸ್ಥರು ಹೆಚ್​​ಐವಿ ಹಾಗೂ ರಕ್ತದಾನ ಮಹತ್ವದ ವಿಷಯವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸೇವೆ ಒದಗಿಸುವ ಸಂಸ್ಥೆಗಳಲ್ಲಿ ಅಥವಾ ಇಲಾಖಾ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಸೋಂಕಿತ ಸಿಬ್ಬಂದಿಗೆ ಯಾವುದೇ ರೀತಿಯ ತಾರತಮ್ಯ ಮಾಡಿದ್ದು ಕಂಡುಬಂದಲ್ಲಿ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಲಾಗುವುದು. ಅನುಮಾನವಿದ್ದಲ್ಲಿ ಐಸಿಟಿಸಿಗೆ ಹೋಗಿ ಉಚಿತ ಹೆಚ್​ಐವಿ ಪರೀಕ್ಷೆ ಮಾಡಿಸಿಕೊಳ್ಳಿ. ಕರ್ನಾಟಕ ರಾಜ್ಯದಾದ್ಯಂತ ಹೆಚ್​ಐವಿ/ಏಡ್ಸ್​ ಮತ್ತು ನಿಯಂತ್ರಣ ಕಾಯ್ದೆ(2017) ಜಾರಿಯಾಗಿದೆ. ಸೋಂಕಿತರಿಗೆ ಮಾಡುವ ಯಾವುದೇ ರೀತಿಯ ತಾರತಮ್ಯ ಶಿಕ್ಷಾರ್ಹವಾಗಿದೆ. 1 ಲಕ್ಷ ರೂ ದಂಡ ಹಾಗೂ 1 ವರ್ಷ ಜೈಲು ಶಿಕ್ಷೆ ವಿಧಿಸಬಹುದು. ಹೆಚ್​​ಐವಿ ಸೋಂಕಿನ ತಡೆಗೆ ಕೈ ಜೋಡಿಸಿ. ಹೆಚ್ಚಿನ ಮಾಹಿತಿಗಾಗಿ 1097ಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ಡಾ.ಶಾಕೀರ್ ತಿಳಿಸಿದ್ದಾರೆ.

ಇದನ್ನೂ ಓದಿ: ಟ್ಯಾಟೂ ಹಾಕಿಸುವ ಯೋಚನೆಯಲ್ಲಿದ್ದೀರಾ? ಮಾರಣಾಂತಿಕ ಕಾಯಿಲೆಗೆ ತುತ್ತಾಗಬಹುದು ಎಚ್ಚರ!

ABOUT THE AUTHOR

...view details