ರಾಯಚೂರು: ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ದುರ್ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಬದ್ರಿನಾಥ ಕಾಲೋನಿಯಲ್ಲಿ ಬುಧವಾರ ಬೆಳಗ್ಗೆ ಘಟನೆ ನಡೆದಿದೆ. ಶಿಲ್ಪಾ (28) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಗೃಹಿಣಿ ಎಂದು ಗುರುತಿಸಲಾಗಿದೆ. ಮೃತ ಮಹಿಳೆಯ ಪತಿ ಶರತ್, ಅತ್ತೆ ಶಶಿಕಲಾ ಹಾಗೂ ಮಾವ ಸುರೇಶ್ ಅವರು ಕೊಲೆ ಮಾಡಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ಎರಡು ಕುಟುಂಬಗಳ ಮಧ್ಯೆ ಗಲಾಟೆ:ಈ ವೇಳೆ ಶಿಲ್ಪಾ ಅವರ ಮಾವನಿಗೆ ಮೃತಳ ಸಂಬಂಧಿಕರು ಥಳಿಸಿದ್ದು, ಸ್ಥಳೀಯರು ಹಾಗೂ ಪೊಲೀಸರು ಜಗಳ ಬಿಡಿಸಿದ್ದಾರೆ. ನಿನ್ನೆ ರಾತ್ರಿ ಪತಿ ಹಾಗೂ ಪೋಷಕರು ಶಿಲ್ಪಾಳನ್ನು ಕೊಂದು ಮನೆ ಮೇಲಿಂದ ತಳ್ಳಿದ್ದಾರೆ. ಜಗಳ ಮಾಡಿ ಮಹಡಿಯಿಂದ ತಳ್ಳಿ ಕೊಲೆಗೈದಿದ್ದಾರೆ ಎಂದು ಮೃತಳ ಸಹೋದರ ದೂರಿದ್ದಾರೆ.
2022ರ ಜೂನ್ನಲ್ಲಿ ಶರತ್ ಹಾಗೂ ಶಿಲ್ಪಾಗೆ ಮದುವೆಯಾಗಿತ್ತು. ಪತಿ ಹಾಗೂ ಪತ್ನಿ ನಡುವೆ ಕೌಟುಂಬಿಕ ಕಲಹ ಉಂಟಾಗಿತ್ತು. ಈ ನಡುವೆ ಪತಿಯ ತಂದೆ ತನ್ನ ಸೊಸೆಯನ್ನು ಸಮಾಧಾನಪಡಿಸಿ, ಸೊಸೆಯನ್ನು ಮನೆಗೆ ಕರೆದಿದ್ದರು. ಆದರೆ ಕೌಟುಂಬಿಕ ಕಲಹ ಈಗ ಸಾವಿನಲ್ಲಿ ಕೊನೆಯಾಗಿದೆ. ಘಟನೆಯಿಂದಾಗಿ ಮೃತಳ ಪೋಷಕರು ತೀವ್ರವಾಗಿ ಕೆರಳಿದ್ದು, ಪತಿ ಹಾಗೂ ಅವರು ಕುಟುಂಬಸ್ಥರ ಮೇಲೆ ಆಕ್ರೋಶಗೊಂಡು ಕೆಂಡಾಮಂಡಲವಾಗಿದ್ದಾರೆ. ಪರಾರಿಯಾಗಿರುವ ಪತಿ ಶರತ್ ಬರೋವರೆಗೂ ಮೃತದೇಹ ಎತ್ತಲು ಬಿಡಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ನೇತಾಜಿ ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮೃತ ಶಿಲ್ಪಾ ಅವರ ತಂದೆ ವೀರೇಶರೆಡ್ಡಿ ಮಾತನಾಡಿ, ಮನೆಯಲ್ಲಿದ್ದ ಮಗಳನ್ನು ಆಕೆಯ ಮಾವನ ಮಾತನ್ನು ನಂಬಿ ಕಳುಹಿಸಿ ಕೊಟ್ಟಿದ್ದೆವು. ಆದರೆ ಈಗ ಹೀಗಾಗಿದೆ. ಗಂಡ, ಅತ್ತೆ, ಮಾವ ಸೇರಿ ನನ್ನ ಮಗಳನ್ನು ಕೊಲೆ ಮಾಡಿದ್ದಾರೆ. ಸೊಸೆಯನ್ನು ಮಗಳ ಥರ ನೋಡಿಕೊಳ್ಳುತ್ತೇವೆ. ನನಗೆ ಮೇಜರ್ ಆಪರೇಷನ್ ಇದೆ. ಬೆಂಗಳೂರಿಗೆ ಆಪರೇಷನ್ಗೆ ಹೋಗುವಾಗ, ಮಗ ಸೊಸೆ ಜೊತೆಗೆ ಇದ್ದರೆ ಕಷ್ಟ, ಗಲಾಟೆ ಮಾಡಿಕೊಳ್ಳುತ್ತಾರೆ ಎಂದು ಆಕೆಯ ಮಾವ ಅವಳನ್ನು ನಮ್ಮ ಮನೆಗೆ ತಂದು ಬಿಟ್ಟು ಹೋಗಿದ್ದರು. ಆಪರೇಷನ್ ಆದ ಬಳಿಕ ಬಂದು ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದ್ದರು. ಹಾಗೆಯೇ ಆಪರೇಷನ್ ಆದ ಬಳಿಕ ಬಂದು, ನನ್ನ ಮಗ ಬೇಡ, ಸೊಸೆ ಬೇಕು ನಮಗೆ. ಅವಳನ್ನು ಮಗಳಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿ ಮಾವನೇ ಬಂದು ಕರೆದುಕೊಂಡು ಹೋಗಿದ್ದ. ಆದರೆ ಈಗ ನನ್ನ ಮಗಳು ಹೆಣವಾಗಿದ್ದಾಳೆ. ಮಗಳನ್ನು ಚಿನ್ನ, ಬೆಳ್ಳಿ, ನಗದು ಸೇರಿ 50 ಲಕ್ಷ ವರದಕ್ಷಿಣೆ ನೀಡಿ, ಅದ್ಧೂರಿಯಾಗಿಯೇ ಮದುವೆ ಮಾಡಿಕೊಟ್ಟಿದ್ದೆವು. ನಂಬಿ ಕಳುಹಿಸಿದ್ದಕ್ಕೆ ಮೂವರು ಸೇರಿ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.