ರಾಯಚೂರು :ಆರ್‌ಆರ್‌ನಗರ ಮತ್ತು ಶಿರಾ ಈ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ. ಇದರ ಬೆನ್ನಲೇ ಮಸ್ಕಿ ವಿಧಾನಸಭಾ ಕ್ಷೇತ್ರದ ಮೇಲೂ ಈ ಫಲಿತಾಂಶದ ಎಫೆಕ್ಟ್ ಆಗಲಿದಿಯೇ ಎಂಬ ರಾಜಕೀಯ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ.
ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬರುವ ದಿನಗಳಲ್ಲಿ ಮಸ್ಕಿ ವಿಧಾನಸಭಾ ಬೈ ಎಲೆಕ್ಷನ್ ನಡೆಯಲಿದೆ. ಇದಕ್ಕಾಗಿ ಬಿಜೆಪಿ-ಕಾಂಗ್ರೆಸ್ ಭಾರಿ ಸಿದ್ದತೆ ಮಾಡಿಕೊಳ್ಳುತ್ತಿವೆ. ಚುನಾವಣಾ ದಿನಾಂಕ ಘೋಷಣೆಯ ಮುನ್ನವೇ ಪಕ್ಷಾಂತರ ನಡೆದಿದ್ದು, ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುವ ಸಾಧ್ಯತೆಯಿದೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕಾಡಾ ಅಧ್ಯಕ್ಷರಾಗಿದ್ದ ಆರ್.ಬಸವನಗೌಡ ತುರುವಿಹಾಳ ಬಿಜೆಪಿ ತೊರೆದು ಈಗ ಇತ್ತೀಚೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವುಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ, ಉಪ ಚುನಾವಣೆ ಮಹೂರ್ತ ನಿಗದಿಗೂ ಮುನ್ನವೇ ಕಣ ರಂಗೇರುವಂತೆ ಮಾಡಿದ್ದಾರೆ.
ಆರ್.ಆರ್.ನಗರ ಮತ್ತು ಶಿರಾ ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರಾನೇರ ಸ್ಪರ್ಧೆ ಏರ್ಪಟಿತ್ತು. ನಾಯಕರು ಮತದಾರರನ್ನು ಸೆಳೆಯಲು ನಾನಾ ಕಸರತ್ತು ಮಾಡುವ ಮೂಲಕ ಗೆಲುವು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಅಂತಿಮವಾಗಿ ಆಡಳಿತಾರೂಢ ಬಿಜೆಪಿ ಪಕ್ಷದ ಅಭ್ಯರ್ಥಿಗಳೇ ವಿಜಯಮಾಲೆ ಧರಿಸಿದರು. ಈ ಫಲಿತಾಂಶ ಮಸ್ಕಿ ಕ್ಷೇತ್ರದ ಮೇಲೂ ಪರಿಣಾಮ ಬೀರಬಹುದಾ ಎನ್ನುವ ಲೆಕ್ಕಾಚಾರ ನಡೆದಿದೆ.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ 213 ಮತಗಳಿಂದ ಸೋಲು ಅನುಭವಿಸಿದ ಆರ್.ಬಸವನಗೌಡ ತುರುವಿಹಾಳ, ಬರುವ ಬೈ ಎಲೆಕ್ಷನ್ನಲ್ಲಿ ಕಾಂಗ್ರೆಸ್ನಿಂದ ಅಖಾಡಕ್ಕಿಳಿಯುವ ಸಾಧ್ಯತೆಯಿದೆ. ಇತ್ತ ಕಾಂಗ್ರೆಸ್ನಿಂದ ಸ್ಪರ್ಧಿಸಿ 213 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದ ಪ್ರತಾಪ್ ಗೌಡ ಪಾಟೀಲ್ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ.
ಆದರೆ, ಕಳೆದ ಎರಡು ಬಾರಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಈ ಸಾರಿ ನಡೆಯುವ ಬೈ ಎಲೆಕ್ಷನ್ನಲ್ಲೂ ಸಹ ಕಾಂಗ್ರೆಸ್ನಿಂದ ಪ್ರಬಲ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಬೇಕೆಂದು ಆರ್.ಬಸವನಗೌಡರನ್ನು ಪಕ್ಷಕ್ಕೆ ಕರೆ ತರಲಾಗಿದೆ. ಇದರಿಂದ ಪ್ರತಾಪಗೌಡ ಪಾಟೀಲ್ರನ್ನು ಮಣಿಸಬಹುದೆಂಬ ಲೆಕ್ಕಾಚಾರವೂ ಇದೆ ಎನ್ನಲಾಗುತ್ತಿದೆ.
ಉಪಚುನಾವಣೆ ಫಲಿತಾಂಶದ ಬಳಿಕ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಸಹ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಶುಭಾಶಯ ಕೋರಿದ್ದಾರೆ. ಬಳಿಕ ಕ್ಷೇತ್ರದಲ್ಲಿ ರಾಜಕೀಯ ವಿದ್ಯಾಮಾನಗಳನ್ನು ಚರ್ಚಿಸಿ ಎಲೆಕ್ಷನ್ ಪೂರ್ವ ತಯಾರಿಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.