ರಾಯಚೂರು :2023ರಲ್ಲಿ ಚುನಾವಣೆ ನಡೆದು ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು. 113 ಮ್ಯಾಜಿಕ್ ನಂಬರ್ ನಾವು ಪಡೆಯಬೇಕು. ಆ ಬಳಿಕ ಶಾಸಕಾಂಗ ಪಕ್ಷ ಸಭೆ ನಡೆಯುತ್ತದೆ. ಆ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಆಗುತ್ತೆ. ಅವರೇ ಕರ್ನಾಟಕದ ಸಿಎಂ ಆಗುತ್ತಾರೆ. ಮುಖ್ಯಮಂತ್ರಿ ಆಗುವುದರ ಕುರಿತು ಹಾದಿ-ಬೀದಿಯಲ್ಲಿ ಆಡುವ ಮಾತು ಅಲ್ಲ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಮಾತನಾಡುವವರು ನಾಳೆ ಶಾಸಕಾಂಗ ಪಕ್ಷದ ಸದಸ್ಯರಾಗಬೇಕು ಎನ್ನುವ ಮೂಲಕ ಸಿಎಂ ಬಗ್ಗೆ ಹೇಳಿಕೆ ನೀಡುವ ಕೈ ನಾಯಕರಿಗೆ ಟಾಂಗ್ ನೀಡಿದ ಅವರು, ಈಗ ಸಿಎಂ ಯಾರು ಎಂದು ನಾನು ಹೇಳಲು ಆಗಲ್ಲ ಎಂದರು.
ಪರೀಕ್ಷೆ ಏಕೆ ರದ್ದು ಮಾಡಬಾರದು?:ಬಿ.ಎಸ್.ಯಡಿಯೂರಪ್ಪ ಸರ್ಕಾರದ ಮಂತ್ರಿಮಂಡಲದ ಸಚಿವರಲ್ಲಿ ಹೊಂದಾಣಿಕೆ ಇಲ್ಲ. ಬಿಎಸ್ವೈ ಸರ್ಕಾರದ ಮಂತ್ರಿಗಳು ಒಬ್ಬರು ಒಂದು ಹೇಳಿಕೆ ನೀಡುತ್ತಾರೆ. ಎಸ್ಎಸ್ಎಲ್ಸಿ ಪರೀಕ್ಷೆ ಮಾಡೇ ತೀರುತ್ತೇನೆ ಎಂದ ಸಚಿವ ಸುರೇಶ್ ಕುಮಾರ್, ದೇಶದ ಬಹುತೇಕ ರಾಜ್ಯಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಪರೀಕ್ಷೆ ಏಕೆ ರದ್ದು ಮಾಡಬಾರದು ಎಂದರು.
ಸುಪ್ರೀಂಕೋರ್ಟ್ ಆದೇಶ ಭಾರತದ ಎಲ್ಲಾ ರಾಜ್ಯಗಳಿಗೂ ಅನ್ವಯವಾಗುತ್ತದೆ. ಇದನ್ನ ಶಿಕ್ಷಣ ಸಚಿವರು ಅರ್ಥ ಮಾಡಿಕೊಳ್ಳಬೇಕು. ಈ ಸರ್ಕಾರ ಪಂಚೇಂದ್ರಿಯ ಇಲ್ಲದ ಸರ್ಕಾರವಾಗಿದೆ. ಸರ್ಕಾರದವರಿಗೆ ಕಣ್ಣು ಇಲ್ಲ, ಕಿವಿನೂ ಇಲ್ಲ. ಬಾಯಿನೂ ಇಲ್ಲ ಜತೆಗೆ ಸ್ಪರ್ಶ ಜ್ಞಾನವೂ ಇಲ್ಲವೆಂದು ವಾಗ್ದಾಳಿ ನಡೆಸಿದರು.
ಓದಿ:ಹತ್ತು ದಿನಗಳೊಳಗೆ ಎಲ್ಲಾ ವಿದ್ಯಾರ್ಥಿಗಳಿಗೂ ಲಸಿಕೆ : ಡಿಸಿಎಂ ಅಶ್ವತ್ಥ್ ನಾರಾಯಣ