ರಾಯಚೂರು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾರಾಯಣಪುರ ಬಲದಂಡೆ ನಾಲೆ ಒಡೆದು ಅಪಾರ ಪ್ರಮಾಣ ನೀರು ಪೋಲಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಾರಾಯಣಪುರ ನಾಲೆ ಒಡೆದು ಭಾರಿ ಪ್ರಮಾಣದ ನೀರು ಪೋಲು - ರಾಯಚೂರಿನ ನಾರಾಯಣಪುರ ನಾಲೆ
ದೇವದುರ್ಗ ತಾಲೂಕಿನ ಗಲಗ್ ಗ್ರಾಮದಲ್ಲಿ ನಾರಾಯಣಪುರ ಬಲದಂಡೆಯ 12ನೇ ವಿತರಣೆ ಕಾಲುವೆ ಒಡೆದಿದೆ. ಇದರ ಪರಿಣಾಮ ರೈತರಿಗೆ ಹೊಲ-ಗದ್ದೆಗೆ ಪೂರೈಕೆಯಾಗಬೇಕಾದ ನೀರು ಅನಗತ್ಯವಾಗಿ ಪೋಲಾಗುತ್ತಿದೆ.
ನಾಲೆ ಅಸುಪಾಸಿನ ಹೊಲ-ಗದ್ದೆಗಳಿಗೆ ನುಗ್ಗಿ ಬೆಳೆ ಸಹ ಹಾನಿಯಾಗಿದೆ. ನಾಲೆಯನ್ನ ಕೆಬಿಜೆಎನ್ಎಲ್ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಇದಕ್ಕಾಗಿ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತದೆ. ಆದ್ರೆ ಅಧಿಕಾರಗಳ ನಿರ್ಲಕ್ಷ್ಯ ಹಾಗೂ ಕಳಪೆ ಕಾಮಗಾರಿ ಇದಕ್ಕೆ ಕಾರಣ ಎಂದು ರೈತರು ದೂರಿದ್ದಾರೆ.
ನಾಲೆಯ ನೀರು ನುಗ್ಗಿ ಬೆಳೆ ಹಾನಿಯಾದ ರೈತರಿಗೆ ಬೆಳೆ ನಷ್ಟ ಪರಿಹಾರ ಹಾಗೂ ನಾಲೆಯ ದುರಸ್ತಿಗೊಳಿಸಿ ನಾಲೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಭವಿಸಿರುವ ಘಟನೆಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.