ರಾಯಚೂರು : ಜಿಲ್ಲೆಯಲ್ಲಿ ಬೇಸಿಗೆ ಆರಂಭ ಮುನ್ನವೇ ನೀರಿಗಾಗಿ ಹಾಹಾಕಾರ ಶುರುವಾಗಿತ್ತು, ಇದೀಗ ಮತ್ತಷ್ಟು ನೀರಿನ ಸಮಸ್ಯೆ ಜಟಿಲಗೊಂಡಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ತಲೆದೋರಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿಗಾಗಿ ಸ್ವತಃ ಗ್ರಾಮಸ್ಥರೇ ಮನೆ ಮನೆಯಿಂದ ಹಣ ಸಂಗ್ರಹಿಸಿ ಬೋರವೆಲ್ ರಿಪೇರಿ ಮಾಡಿಸಿಕೊಂಡಿದ್ದಾರೆ.
ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ವೀರಾಪುರ ಗ್ರಾಮದಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ನಿತ್ಯ ಕುಡಿಯುವ ನೀರಿಗಾಗಿ ಬೆಳಗ್ಗೆಯಿಂದ ಸಂಜೆಯವರೆಗೆ ಸಾಲಿನಲ್ಲಿ ನಿಂತುಕೊಂಡು ಬೋರ್‌ವೆಲ್‌ನಿಂದ ಬರುವ ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತ ಕುಳಿತು ನೀರು ತೆಗೆದುಕೊಂಡು ಹೋಗಬೇಕಾದ ಅನಿವಾರ್ಯ ವಾತಾವರಣ ನಿರ್ಮಾಣಗೊಂಡಿದೆ.
ಸುಮಾರು 300 ಮನೆಗಳಿರುವ 2,000ಕ್ಕೂ ಹೆಚ್ಚು ಜನಸಂಖ್ಯೆಯಿರುವ ಗ್ರಾಮದಲ್ಲಿ 2-3 ಬೋರ್‌ವೆಲ್ ಇದ್ದು ಅವೂ ಕೂಡಾ ಈ ಹಿಂದೆ ಕೆಟ್ಟು ನಿಂತಿದ್ದವು, ಸಂಬಂಧಿಸಿದ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ರೆ, ಅಧಿಕಾರಿಗಳು ಮಾತ್ರ ಕ್ಯಾರೆ ಅಂದಿಲ್ಲ, ಇದರಿಂದ ರೋಸಿ ಹೋದ ಜನ ತಲಾ 50 ರೂಪಾಯಿಯಂತೆ ಚಂದಾ ಸಂಗ್ರಹಿಸಿ ಬೋರ್ ವೆಲ್ ರಿಪೇರಿ ಮಾಡಿಸಿಕೊಂಡು, ತಾಸಿಗೊಮ್ಮೆ ಬರುವ ನೀರನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.