ರಾಯಚೂರು:ಜಿಲ್ಲೆಯ ಲಿಂಗಸುಗೂರು, ಸಿಂಧನೂರು, ಮಸ್ಕಿ ತಾಲ್ಲೂಕುಗಳಲ್ಲಿ 2ನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ಬಿರುಸಿನ ಮತದಾನ ನಡೆಯುತ್ತಿದೆ.
2ನೇ ಹಂತದ ಗ್ರಾ.ಪಂ ಚುನಾವಣೆ: ರಾಯಚೂರು ಜಿಲ್ಲೆಯಲ್ಲಿ ಮತದಾನ ಆರಂಭ ಬೆಳಿಗ್ಗೆ 7 ಗಂಟೆಯಿಂದಲೇ ಮತದಾರರು ಮತಗಟ್ಟೆಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಲಿಂಗಸುಗೂರು ತಾಲೂಕಿನ 29 ಗ್ರಾಮ ಪಂಚಾಯಿತಿಗಳ 531 ಸ್ಥಾನಗಳ ಪೈಕಿ 75 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 456 ಸ್ಥಾನಗಳಿಗೆ 224 ಮತಗಟ್ಟೆಗಳಲ್ಲಿ ಮತದಾನ ವ್ಯವಸ್ಥೆ ಕಲ್ಪಿಸಲಾಗಿದೆ.
ಮಸ್ಕಿ ತಾಲ್ಲೂಕಿನ 21 ಗ್ರಾಮ ಪಂಚಾಯಿತಿಗಳಲ್ಲಿ 404 ಸ್ಥಾನಗಳ ಪೈಕಿ 55 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. 276 ಸ್ಥಾನಗಳಿಗೆ 136 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ.
ಸಿಂಧನೂರು ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳ 626 ಸ್ಥಾನಗಳಲ್ಲಿ 87 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. 539 ಸ್ಥಾನಗಳಿಗೆ 276 ಮತಗಟ್ಟೆಗಳಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದೆ.
ಉಪವಿಭಾಗ ಮಟ್ಟದಲ್ಲಿ ಬೆಳಗ್ಗೆಯಿಂದಲೇ ಮತದಾರರು ನಿರ್ಭಯದಿಂದ ಅಗಮಿಸಿ ಮತದಾನ ಮಾಡುತ್ತಿದ್ದಾರೆ. ಯಾವುದೇ ಅಡೆ ತಡೆ, ತಾಂತ್ರಿಕ ದೋಷದ ಬಗ್ಗೆ ವರದಿ ಬಂದಿಲ್ಲ. ಬೆಳಗ್ಗೆ 10 ಗಂಟೆ ವೇಳೆಗೆ ಅಂದಾಜು ಶೇ.6ರಷ್ಟು ಮತದಾನ ನಡೆದ ಬಗ್ಗೆ ವರದಿಯಾಗಿದೆ ಎಂದು ಉಪ ವಿಭಾಗಾಧಿಕಾರಿ ರಾಜಶೇಖರ ಡಂಬಳ ತಿಳಿಸಿದರು.