ರಾಯಚೂರು: ನಗರದಲ್ಲಿ ಇಂದು ತೃತೀಯ ಲಿಂಗಗಳು, ದೇವದಾಸಿ ವಿಮುಕ್ತ ಮಹಿಳೆಯರಿಂದ ಮತದಾನದ ಬಗ್ಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ನಗರದ ಜಿಲ್ಲಾ ಪಂಚಾಯತ್ ಸಬಾಂಗಣದಲ್ಲಿ ಜಾಥಾಗೆ ಡಿಸಿ ಶರತ್ ಬಿ. ಚಾಲನೆ ನೀಡಿದರು.
ತೃತೀಯ ಲಿಂಗಿಗಳಿಂದ ಮತದಾನ ಜಾಗೃತಿ ಜಾಥಾ - ಚುನಾವಣಾ ಗುರುತಿನ ಚೀಟಿ
ತೃತೀಯ ಲಿಂಗಗಳು ಮತ್ತು ದೇವದಾಸಿ ವಿಮುಕ್ತ ಮಹಿಳೆಯರಿಂದ ಮತದಾನದ ಬಗ್ಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಜಾಥಾದಲ್ಲಿ ಕೆಲವೇ ಮಹಿಳೆಯರು, ತೃತೀಯ ಲಿಂಗಿಗಳು ಆಗಮಿಸಿದ್ದರು. ಇದಕ್ಕೆ ಕಾರಣ ಕೇಳಿದಾಗ ಅವರು ನಮ್ಮ ಸಹೋದ್ಯೋಗಿಗಳಿಗೆ ಇನ್ನೂ ಚುನಾವಣಾ ಗುರುತಿನ ಚೀಟಿ ನೀಡಿಲ್ಲ. ಅಧಿಕಾರಿಗಳನ್ನ ಕೇಳಿದರೆ ಇನ್ನೂ ಬರುತ್ತೆ ಅಂತ ಹೇಳುತ್ತಿದ್ದಾರೆ. ಅಲ್ಲದೇ ದೇವದಾಸಿ ಪುನರ್ ವಸತಿ ಫಲಾನುಭವಿಗಳಿಗೆ ಹಲವಾರು ತಿಂಗಳ ಪ್ರೊತ್ಸಾಹಧನ ನೀಡಬೇಕಾಗಿದೆ ಎಂದು ಪ್ರತಿಕ್ರಿಯಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಸಮಾಜದ ತುಳಿತಕ್ಕೊಳಗಾಗಿ ಅನೇಕ ಕಷ್ಟಗಳನ್ನು ಅನುಭವಿಸಿ ಮುಖ್ಯವಾಹಿನಿಗೆ ಬರುವ ದೇವದಾಸಿ ವಿಮುಕ್ತ, ತೃತೀಯ ಲಿಂಗಿಗಳ ಮೂಲಕ ಜಾಗೃತಿ ಮೂಡಿಸಿ ದೇಶದಲ್ಲಿ ಮತದಾನಕ್ಕೆ ನೀಡಿದ ಮಹತ್ವ ಸಾರುವ ಧ್ಯೆಯ ಹೊಂದಲಾಗಿದೆ. ಮತದಾನ ದೇಶವನ್ನು ಸುಭದ್ರಗೊಳಿಸುವಲ್ಲಿ ನಾಗರಿಕರಿಗೆ ನೀಡಿರುವ ಅಸ್ತ್ರ ಹಾಗೂ ಹಕ್ಕು. ಇದನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಸಲಹೆ ನೀಡಿದರು.