ರಾಯಚೂರು:ಅತ್ಯಾಚಾರ ಕೃತ್ಯ ಎಸೆಗಿದವರ ವಿರುದ್ಧ ಕ್ರಮ ಜರುಗಿಸಲು ಸರ್ಕಾರ ಬಿಗಿಯಾದ ಕಾನೂನುಗಳನ್ನ ಜಾರಿಗೊಳಿಸಬೇಕೆಂದು ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಯಚೂರಿನಲ್ಲಿ ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಮಾತನಾಡಿದ ಅವರು, ಹೆಣ್ಣುಮಕ್ಕಳ ಬಗ್ಗೆ ಹೆಚ್ಚಿನ ಮಟ್ಟದ ಜಾಗೃತಿ ಅಗತ್ಯವಿದೆ. ಸರ್ಕಾರ ಕಾನೂನುಗಳನ್ನು ಬಿಗಿ ಮಾಡಬೇಕಾಗಿದೆ. ಸಂದರ್ಭಗಳು ಹೀಗೆ ಬರುತ್ತೆ ಅಂತ ಯಾರಿಗೂ ಕನಸು ಬೀಳುವುದಿಲ್ಲ. ವಿದೇಶಿ ಪ್ರಭಾವ ಮತ್ತು ಸಾಮಾಜಿಕ ಜಾಲತಾಣಗಳು ಪ್ರಭಾವ ಬೀರುತ್ತಿವೆ. ವಿದೇಶಿ ಪ್ರಭಾವಕ್ಕೆ ಯುವಕರು ಒಳಗಾಗಿದ್ದರಿಂದ ಇಂಥಾ ಕೃತ್ಯಗಳು ನಡೆದಿವೆ ಎಂದಿದ್ದಾರೆ.
ನಾನು ಯಾವುದೇ ಪಕ್ಷಕ್ಕೆ ಬೈಯಲು ಇಷ್ಟ ಪಡುವುದಿಲ್ಲ. ಪ್ರಧಾನಿಮಂತ್ರಿಗೆ ಇರುವ ಜವಾಬ್ದಾರಿ ಪ್ರತಿ ಪ್ರಜೆಗೂ ಇದೆ. ಇಂಥಾ ಪ್ರಕರಣ ತಡೆಯಲು ಸರ್ಕಾರ ಬಿಗಿ ಕಾನೂನು ಜಾರಿಗೆ ತರಬೇಕು. ವಿದೇಶಗಳಲ್ಲಿ ಅತ್ಯಾಚಾರ ಪ್ರಕರಣ ನಡೆದರೆ ಬೇಲ್ ಸಹ ಸಿಗಲ್ಲ. ವಿದೇಶದ ಮಾದರಿ ಕಾನೂನು ನಮ್ಮ ದೇಶದಲ್ಲಿಯೂ ಜಾರಿಗೆ ಬರಬೇಕು. ಆಗ ಜನರು ತಪ್ಪು ಮಾಡಲು ಹೆದರುತ್ತಾರೆ ಎಂದು ವಿನಯ್ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಕಾನೂನಿನಲ್ಲಿ ಒಳಗೆ ಹೋಗಲು ದಾರಿ ಇದೆ. ಬಚಾವ್ ಆಗಿ ಹೊರಗೆ ಬರಲು ಕಾನೂನು ಇದೆ. ಕಳ್ಳತನ ಮಾಡುವನು ಪೊಲೀಸರಿಗಿಂತ ಬುದ್ಧಿವಂತ ಇರುತ್ತಾನೆ. ಒಳಗೆ ಹೋಗುವ ಮುನ್ನವೇ ಹೊರಗಡೆ ಬರಲು ಎಲ್ಲಾ ದಾರಿಗಳನ್ನ ಕಂಡು ಕೊಡಿರುತ್ತಾನೆ. ಅತ್ಯಾಚಾರ ಪ್ರಕರಣ ತಡೆಯಲು ಕಾನೂನುಗಳು ಬಿಗಿಯಾಗಬೇಕು ಎಂದು ವಿನಯ್ ಗುರೂಜಿ ಹೇಳಿದ್ದಾರೆ.