ರಾಯಚೂರು: ಕಲಿಯುಗದ ಕಾಮಧೇನು ಭಕ್ತರ ಕಲ್ಪವೃಕ್ಷ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 427ನೇ ವರ್ಧಂತಿ ಉತ್ಸವ ವಿಜೃಭಂಣೆಯಿಂದ ಜರುಗುತ್ತಿದೆ. ರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿ ಉತ್ಸವ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಗುರುವೈಭೋತ್ಸವ ಕೊನೆಯ ದಿನವಾದ ಇಂದು ವರ್ಧಂತಿ ಉತ್ಸವ ನೆರವೇರುತ್ತಿದೆ. ಶ್ರೀರಾಘವೇಂದ್ರ ಸ್ವಾಮಿಗಳು ಜನ್ಮದಿನದ ನಿಮಿತ್ತವಾಗಿ ಈ ವರ್ಧಂತಿ ಉತ್ಸವವನ್ನು ಆಚರಿಸಲಾಗುತ್ತದೆ.
ಬೆಳಗ್ಗೆ ರಾಘವೇಂದ್ರ ಸ್ವಾಮಿಗಳು ಮೂಲ ಬೃಂದಾವನಕ್ಕೆ ಅಭಿಷೇಕ ಸೇರಿದಂತೆ ವಿಶೇಷ ಪೂಜೆಗಳನ್ನು ನೇರವೇರಿಸಲಾಯಿತು. ಬಳಿಕ ತಿರುಪತಿ ತಿರುಮಲ ಶ್ರೀನಿವಾಸದ ದೇವಾಲಯದಿಂದ ಬಂದಿದ್ದ ಶೇಷ ವಸ್ತ್ರವನ್ನು ಮಠದ ಧಾರ್ಮಿಕ ಸಂಪ್ರದಾಯದಂತೆ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಬರಮಾಡಿಕೊಂಡು, ರಾಯರಿಗೆ ಸಮರ್ಪಿಸಿದರು. ಶೇಷ ವಸ್ತ್ರವನ್ನು ತಂದಿದ್ದ ತಿರುಮಲದ ದೇವಾಲಯದ ಅಧಿಕಾರಿಗಳಿಗೆ ಶ್ರೀಮಠದಿಂದ ಸತ್ಕರಿಸಿ, ಸನ್ಮಾನಿಸಲಾಯಿತು.