ರಾಯಚೂರು :ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆಂದು ಹಲವು ದಿನಗಳ ಬೇಡಿಕೆಯಿದೆ. ಈ ಹಿನ್ನೆಲೆ ಸರ್ಕಾರದಿಂದ ಬಿಡುಗಡೆ ಮಾಡಬೇಕಾದ ಅನುದಾನ ನೀಡದ ಪರಿಣಾಮ, ಕೆಕೆಆರ್ಡಿಬಿಯ ವಿಶೇಷ ಅನುದಾನವನ್ನ ಜಿಲ್ಲೆಯ ಶಾಸಕರು ನೀಡಲು ಮುಂದಾಗಿದ್ದಾರೆ.
ರಾಯಚೂರು ನಗರದ ಯರಮರಸ್ ಹೊರವಲಯದಲ್ಲಿರುವ 408 ಎಕರೆ ಭೂಮಿಯನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಮೀಸಲಿರಿಸಲಾಗಿದೆ. ಆದರೆ, ವಿಮಾನ ನಿಲ್ದಾಣ ಮಾತ್ರ ನಿರ್ಮಾಣವಾಗಿರಲಿಲ್ಲ.
ಇತ್ತೀಚೆಗೆ ಸರ್ಕಾರ ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಆಸಕ್ತಿ ತೋರಿಸಿದ್ದು, ಬೆಂಗಳೂರಿನಿಂದ ಬಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಆದರೆ, ಸರ್ಕಾರ ನಿಲ್ದಾಣಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ. ಹೀಗಾಗಿ ಕಲ್ಯಾಣ ಕರ್ನಾಟಕದ (ಹೈದರಾಬಾದ್-ಕರ್ನಾಟಕ) ಆರು ಜಿಲ್ಲೆಗಳ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡುವ ಕೆಕೆಆರ್ಡಿಬಿ ಅನುದಾನದಲ್ಲಿ ವಿಮಾನ ನಿಲ್ದಾಣದ ಅನುದಾನವನ್ನ ನೀಡಲು ಜಿಲ್ಲೆಯ ಶಾಸಕರು ನಿರ್ಧಾರಿಸಿದ್ದಾರೆ.