ರಾಯಚೂರು: ಕನಕದಾಸ ಪುತ್ಥಳಿ ಅನಾವರಣ ವೇದಿಕೆ ಕಾರ್ಯಕ್ರಮದಲ್ಲಿ ಗಲಾಟೆ ನಡೆದಿರುವ ಪ್ರಸಂಗ ನಗರದಲ್ಲಿ ನಡೆದಿದೆ. ನಗರದ ಗಂಜ್ ವೃತ್ತದ ಬಳಿ ಕನಕದಾಸ ಪುತ್ಥಳಿ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಚಿವರಾದ ಭೈರತಿ ಬಸವರಾಜ ಹಾಗೂ ಎಂ.ಟಿ.ಬಿ.ನಾಗರಾಜ ಸಮ್ಮುಖದಲ್ಲಿ ಕಾರ್ಯಕ್ರಮ ನಡೆದಿತ್ತು. ಈ ಆಹ್ವಾನ ಪತ್ರಿಕೆಯಲ್ಲಿ ಸಿದ್ದರಾಮಯ್ಯ ಅವರ ಹೆಸರು ಕೈಬಿಟ್ಟಿದ್ದಕ್ಕೆ ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಹಾಲುಮತ ಸಮಾಜದವರಿಂದ ಆಕ್ರೋಶ ವ್ಯಕ್ತವಾಗಿದೆ.
ಇದೆ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಹೆಸರು ಕೈಬಿಟ್ಟಿದ್ದಕ್ಕೆ ಶಾಸಕ ಬಸನಗೌಡ ದದ್ದಲ ಅಸಮಾಧಾನ ವ್ಯಕ್ತಪಡಿಸಿದ್ದು, ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಹೆಸರನ್ನು ಹಾಕಬೇಕಿತ್ತು. ಅದು ಯಾವ ಪ್ರೋಟೋಕಾಲ್ ಪಾಲಿಸಿದ್ದಾರೋ ಗೊತ್ತಿಲ್ಲ. ವಿಶೇಷ ಆಹ್ವಾನಿತರಾಗಿ ಹೆಸರು ಹಾಕಬಹುದಿತ್ತು. ಸಮಾಜಕ್ಕೆ ಸಿದ್ದರಾಮಯ್ಯ ಕೊಡುಗೆ ಅಪಾರವಾಗಿದೆ ಎಂದರು.
ಈ ವೇಳೆ ಮಾತನಾಡಿದ ಶಾಸಕ ಡಾ ಶಿವರಾಜ್ ಪಾಟೀಲ್, ಅವರನ್ನು ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಅವರ ಬರವಿಕೆಗಾಗಿಯೇ ಮೂರು ಬಾರಿ ಕಾರ್ಯಕ್ರಮ ಮುಂದೂಡಲಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು, ಈ ಪುತ್ಥಳಿ ಅನಾವರಣಗೊಳಿಸಲಾಗಿದೆ. ಎಲ್ಲಾ ಮುಖಂಡರೊಂದಿಗೆ ಈ ಕುರಿತು ಚರ್ಚೆ ಮಾಡಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.