ಬಳ್ಳಾರಿ:ಲಾಕ್ಡೌನ್ ಅವಧಿಯಲ್ಲಿ ಖಾಸಗಿ ವಲಯದ ವಿವಿಧ ಕಂಪನಿಗಳಲ್ಲಿ 185 ಮಂದಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಯಶಕಂಡಿದ್ದು, ಈ ಮೂಲಕ ನಿರುದ್ಯೋಗಿಗಳ ಪಾಲಿಗೆ ದಾರಿ ದೀಪವಾಗಿದೆ.
ಕೆಲಸಕ್ಕಾಗಿ ಹೆಸರು ನೋಂದಾಯಿಸಿಕೊಂಡಿದ್ದ ನಿರುದ್ಯೋಗಿಗಳಿಗೆ ವಿವಿಧ ಖಾಸಗಿ ಕಂಪನಿಗಳ ಮಾನವ ಸಂಪನ್ಮೂಲ (ಹೆಚ್ಆರ್) ಅಧಿಕಾರಿಗಳನ್ನು ಸಂಪರ್ಕಿಸಿದ ಉದ್ಯೋಗ ವಿನಿಮಯ ಕೇಂದ್ರವು, ನೇರ ನೇಮಕಾತಿಗೆ ಆದ್ಯತೆ ಕಲ್ಪಿಸಿತು. ಸ್ಥಳದಲ್ಲೇ ಆಫರ್ ಲೆಟರ್ ಕೂಡಾ ಕೊಡಿಸಿದೆ.
ಜೂನ್ನಲ್ಲಿ ಇಲ್ಲಿನ ಸರಳಾದೇವಿ ಕಾಲೇಜಿನಲ್ಲಿ ವಲಸಿಗ ನಿರುದ್ಯೋಗಿಗಳಿಗೆ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಅದರಲ್ಲಿ ಭಾಗವಹಿಸಿದ್ದ 600ಕ್ಕೂ ಅಧಿಕ ಮಂದಿಯ ಪೈಕಿ 101 ಮಂದಿಗೆ ಉದ್ಯೋಗ ದೊರಕಿದೆ. ಜಿಲ್ಲೆಯಲ್ಲಿ 2011-2020 ರವರೆಗೆ ಆಯೋಜಿಸಲಾಗಿದ್ದ ಮೇಗಾ ಹಾಗೂ ಮಿನಿ ಉದ್ಯೋಗ ಮೇಳಗಳಲ್ಲಿ ಸುಮಾರು 21,088 ಮಂದಿ ಭಾಗವಹಿಸಿದ್ದು, 8,688 ಮಂದಿ ಉದ್ಯೋಗಿಗಳಾಗಿದ್ದಾರೆ.
ಉದ್ಯೋಗ ವಿನಿಮಯ ಅಧಿಕಾರಿ ಪಿ.ಎಸ್.ಹಟ್ಟಪ್ಪ ಅವರ ಮಾತು ಈ ಹಿಂದೆ ಸರ್ಕಾರಿ ಅಧಿಸೂಚನೆ ಹೊರಡಿಸಿದ್ದರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಪ್ರಮುಖ ಪಾತ್ರವಹಿಸುತ್ತಿತ್ತು. ಆದರೀಗ, ಸಿಇಟಿ ಮೂಲಕ ನೇರ ನೇಮಕಾತಿ ಪ್ರಕ್ರಿಯೆ ನಡೆಯುವ ಕಾರಣ ಸರ್ಕಾರಿ ಅಧಿಸೂಚನೆಗಳು ಉದ್ಯೋಗ ವಿನಿಮಯ ಕೇಂದ್ರಕ್ಕೆ ಬರಲ್ಲ. ಹೀಗಾಗಿ, ಖಾಸಗಿ ಕಂಪನಿಗಳ ಹೆಚ್ಆರ್ಗಳನ್ನು ನೇರ ಸಂಪರ್ಕಕ್ಕೆ ಪಡೆದು ನಿರುದ್ಯೋಗ ಸಮಸ್ಯೆ ನೀಗಿಸಲು ಈ ಕೇಂದ್ರ ಪ್ರಯತ್ನಿಸುತ್ತಿದೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಉದ್ಯೋಗ ವಿನಿಮಯ ಅಧಿಕಾರಿ ಪಿ.ಎಸ್.ಹಟ್ಟಪ್ಪ, ನಿರುದ್ಯೋಗಿಗಳಿಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಕಲ್ಪಿಸಿಕೊಡುವಲ್ಲಿ ಮುಂದಾಗಿದ್ದೇವೆ. ಕೋವಿಡ್ ಸಂದರ್ಭದಲ್ಲೂ ನೂರಾರು ಯುವಕ-ಯುವತಿಯರಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದೇವೆ ಎಂದರು.