ರಾಯಚೂರು : ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಲಿಂಗಸುಗೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದ ಶಿವಪುತ್ರ ಅಲಿಯಾಸ್ ಶಿವು, ಅಭಿಷೇಕ ಅಲಿಯಾಸ್ ಅಭಿ ಎಂಬುವರು ಸ್ನೇಹಿತ ಶರಣಬಸವ (21) ನನ್ನು ಕೊಲೆ ಮಾಡಿದ್ದರು.
ಪ್ರಕರಣದ ಹಿನ್ನೆಲೆ :ಶರಣಬಸವ, ಅಭಿಷೇಕ, ಶಿವಪುತ್ರ ಈ ಮೂವರು ಸ್ನೇಹಿತರಾಗಿದ್ದರು. ಇವರು ಆಗಾಗ ಜೂಜಾಟ ಆಡುತ್ತಿದ್ದರು. ಹಣ ಕಳೆದುಕೊಂಡಾಗ ಮತ್ತು ಗೆದ್ದಾಗ ಪರಸ್ಪರ ಜಗಳವಾಡುತ್ತಿದ್ದರು. ಮೊಹರಂ ಹಾಗೂ ಹಬ್ಬ ಹರಿದಿನಗಳಲ್ಲಿ ಒಟ್ಟಿಗೆ ಸೇರಿದಾಗ ನಾ ಮೇಲು, ನೀ ಮೇಲು ಎಂದು ಸಣ್ಣಪುಟ್ಟ ವಿಷಯಕ್ಕೆ ಜಗಳವಾಡುತ್ತಿದ್ದರು. ಆದರೆ, ಈ ಸಣ್ಣಪುಟ್ಟ ಜಗಳಗಳಿಂದಲೇ ದ್ವೇಷದ ಭಾವನೆ ಮೂಡಿ ಕೊಲೆ ಮಾಡುವ ಹಂತಕ್ಕೆ ತಿರುಗಿದೆ.
ಅಕ್ಕಲಕೋಟಿ ಚಿಕ್ಕರೇವಣ್ಣ ಸಿದ್ದೇಶ್ವರರ ಪುಣ್ಯತಿಥಿ ಸ್ಮರಣೆ ಹಿನ್ನೆಲೆಯಲ್ಲಿ 2023 ರ ಅ. 5 ರಂದು ರಾತ್ರಿ ವೇಳೆ ಗುರುಸ್ವಾಮಿಯೊಂದಿಗೆ ಶರಣಬಸವ ಬ್ಯಾನರ್‌ಗಳನ್ನು ಕಟ್ಟುತ್ತಿದ್ದ. ಈ ಸಮಯದಲ್ಲಿ ಶಿವಪುತ್ರ ಹಾಗೂ ಅಭಿಷೇಕ ಗುರುಸ್ವಾಮಿಗೆ ಕರೆ ಮಾಡಿ ಗ್ರಾಮದ ಸಾಲಿಗುಡಿ ಹತ್ತಿರ ತನ್ನ ಮಗನನ್ನು ಕಳಿಸುವಂತೆ ಹೇಳಿದ್ದಾರೆ. ರಾತ್ರಿ 10.46 ರ ಸುಮಾರಿಗೆ ಶರಣಬಸವನನ್ನು ಕೊಲೆ ಮಾಡಿ, ತಮ್ಮ ಮೇಲೆ ಆರೋಪ ಬರದಂತೆ ಘಟನೆಯನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಶಾಲಾ ಕೊಠಡಿಯ ಕಿಟಕಿಗೆ ತುಂಬು ತೋಳಿನ ಟಿ ಶರ್ಟ್‌ನೊಂದಿಗೆ ನೇಣು ಬಿಗಿದು ನೇತು ಹಾಕಲಾಗಿತ್ತು.
ಇದನ್ನೂ ಓದಿ :ಚಿಕ್ಕಮಗಳೂರು : ಊಟದಲ್ಲಿ ಸೈನೈಡ್ ಬೆರೆಸಿ ಪತ್ನಿಯ ಕೊಲೆ.. ಪತಿ ಬಂಧನ
ಈ ಕುರಿತು ಮೃತನ ತಾಯಿ ಲಿಂಗಸುಗೂರು ಠಾಣೆಗೆ ದೂರು ನೀಡಿದ್ರು. ಇದಕ್ಕೂ ಮುಂಚೆ ಆತ್ಮಹತ್ಯೆ ಪ್ರಕರಣವೆಂದು ಕೇಸ್ ದಾಖಲಾಗಿತ್ತು. ಆದರೆ, ಮೃತನ ತಾಯಿ ನೀಡಿದ ದೂರಿನ ಆಧಾರದ ಮೇಲೆ ಇಲಾಖೆಯ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಲಿಂಗಸುಗೂರು ಉಪವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಪುಂಡಲೀಕ ಎಂ. ಪಟಾತರ ನೇತೃತ್ವದಲ್ಲಿ ತಂಡ ರಚನೆ ಮಾಡಿ ತನಿಖೆ ನಡೆಸಲಾಗಿದ್ದು, 24 ಗಂಟೆಯೊಳಗೆ ಆರೋಪಿಗಳಿಬ್ಬರನ್ನು ಬಂಧಿಸುವ ಮೂಲಕ ಪ್ರಕರಣ ಭೇದಿಸಲಾಗಿದೆ.