ರಾಯಚೂರು: ಚಲಿಸುತ್ತಿದ್ದ ಆಟೋ ಟೈಯರ್ ಸ್ಫೋಟಗೊಂಡ ಪರಿಣಾಮ ಆಟೋ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂರ್ನಾಲ್ಕು ಜನರು ಗಾಯಗೊಂಡಿರುವ ಘಟನೆ ಆಂಧ್ರದ ಮಹಾದ್ವಾರಂ ಮಂಡಲದ ಹತ್ತಿರ ನಡೆದಿದೆ.
ರಾಯಚೂರು ಜಿಲ್ಲೆಯ ಗಡಿ ಭಾಗದ ಆಂಧ್ರದ ಮಹಾದ್ವಾರಂ ಹತ್ತಿರ ಭಾನುವಾರ ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ. ದೊಡ್ಡಬಳ್ಳಾಪುರದಿಂದ ನಾಲ್ಕೈದು ಜನ ಸ್ನೇಹಿತರು ಬೆಂಗಳೂರಿನಿಂದ ರೈಲು ಮೂಲಕ ಬೆಳಗ್ಗೆ ಮಂತ್ರಾಲಯಂ ರೈಲ್ವೆ ನಿಲ್ದಾಣಕ್ಕೆ ತಲುಪಿದ್ದಾರೆ. ರೈಲ್ವೆ ನಿಲ್ದಾಣದಿಂದ ಆಟೋ ಮೂಲಕ ಮಂತ್ರಾಲಯಕ್ಕೆ ಪ್ರಯಾಣಿಸಿದ್ದಾರೆ. ಆದ್ರೆ ಮಹಾದ್ವಾರಂ ಸಮೀಪ ಆಟೋ ಟೈಯರ್ ಬ್ಲಾಸ್ಟ್ ಆದ ಹಿನ್ನೆಲೆ ಆಟೋ ಪಲ್ಟಿಯಾಗಿದೆ. ಪರಿಣಾಮ, ಆಟೋ ಚಾಲಕ ಹಾಗೂ ರಾಘವೇಂದ್ರ ಎನ್ನುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನುಳಿದವರು ಗಾಯಗೊಂಡಿದ್ದಾರೆ.