ಗುರುಮಠಕಲ್ : ತಾಲೂಕಿನ ನಜರಾಪುರ ಗ್ರಾಮದ ಸಮೀಪದ ದಭೆ ದಭೆ ಜಲಪಾತ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರಿಬ್ಬರು ಸೆಲ್ಫಿ ತೆಗೆದುಕೊಳ್ಳುವ ವೇಳೆ ನೀರಿಗೆ ಬಿದ್ದು ಸಾವಿಗೀಡಾಗಿದ್ದು, ಓರ್ವನನ್ನು ರಕ್ಷಿಸಲಾಗಿದೆ. ಒಂದು ತಿಂಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ.
ಜಲಪಾತದ ಬಳಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಇಬ್ಬರು ಯುವಕರು ನೀರುಪಾಲು - ಸೆಲ್ಫಿ ಕ್ಲಿಕ್ಕಿಸಲು ಹೋಗಿ ಇಬ್ಬರು ಯುವಕರು ಸಾವು
ತಾಲೂಕಿನ ನಜರಾಪುರ ಗ್ರಾಮದ ಸಮೀಪದ ದಭೆ ದಭೆ ಜಲಪಾತ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರಿಬ್ಬರು ಸೆಲ್ಫಿ ತೆಗೆದುಕೊಳ್ಳುವ ವೇಳೆ ನೀರಿಗೆ ಬಿದ್ದು ಸಾವಿಗೀಡಾಗಿದ್ದು, ಓರ್ವನನ್ನು ರಕ್ಷಿಸಲಾಗಿದೆ.
ಹೈದ್ರಾಬಾದ್ ನಿವಾಸಿಗಳಾದ ಅಬ್ದುಲ್ ರಹೀಂ ಹಾಗೂ ಅದ್ನಾನ್ ಎಂಬುವರು ಮೃತಪಟ್ಟವರು. ಹೈದ್ರಾಬಾದ್ನಿಂದ ಗುರುಮಠಕಲ್ ಪಟ್ಟಣದಲ್ಲಿನ ಸಂಬಂಧಿಕರ ಮದುವೆ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಇವರು, ಮಧ್ಯಾಹ್ನದ ಊಟ ಮುಗಿಸಿ ಜಲಪಾತ ವೀಕ್ಷಣೆಗೆ ತೆರಳಿದ್ದರು. ನೀರಿಗಿಳಿದು ಸೆಲ್ಫಿ ತೆಗೆದುಕೊಳ್ಳುವ ವೇಳೆ ದುರಂತ ಸಂಭವಿಸಿದ್ದು, ಇಬ್ರಾಹಿಂ ಎಂಬಾತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುವಕರು ನೀರಿನಲ್ಲಿ ಮುಳಿಗಿದ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ಸಹಾಯದಿಂದ ಶವಗಳನ್ನ ಹೊರ ತೆಗೆದಿದ್ದಾರೆ. ಕಳೆದ ತಿಂಗಳ 11 ರಂದು ರಾಜಸ್ಥಾನ ಮೂಲದ ಯುವಕನೋರ್ವ ಪ್ರಾಣ ಕಳೆದುಕೊಂಡಿದ್ದ. ಈ ಬಗ್ಗೆ ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆಯು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.