ರಾಯಚೂರು: ಜಿಲ್ಲೆಯ ತುಂಗಭದ್ರಾ ಹಾಗೂ ಕೃಷ್ಣಾ ನದಿಗಳೆರೆಡು ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಜನರಿಗೆ ಜಲ ಕಂಟಕದ ಭೀತಿ ಎದುರಾಗಿದೆ.
ಉಕ್ಕಿ ಹರಿಯುತ್ತಿರುವ ತುಂಗಭದ್ರಾ-ಕೃಷ್ಣಾ: ಪ್ರವಾಹ ಭೀತಿಯಲ್ಲಿ ನದಿ ಪಾತ್ರದ ಜನ
ನಿರಂತರ ಮಳೆಗೆ ರಾಯಚೂರು ಜಿಲ್ಲೆಯ ತುಂಗಭದ್ರಾ ಹಾಗೂ ಕೃಷ್ಣಾ ನದಿಗಳೆರೆಡು ತುಂಬಿ ಹರಿಯುತ್ತಿದ್ದು, ಎರಡು ನದಿಗಳಿಂದ ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ.
ತುಂಗಭದ್ರಾ ಜಲಾಶಯದ ಒಳಹರಿವು ಬೆಳಗ್ಗೆ 77,927 ಕ್ಯೂಸೆಕ್ ಇದ್ದು, ತುಂಗಭದ್ರಾ ನದಿಗೆ 88,212 ಕ್ಯೂಸೆಕ್ ನಷ್ಟು ನೀರನ್ನು ಬಿಡಲಾಗುತ್ತಿದೆ. ಇದರಿಂದ ತುಂಗಭದ್ರಾ ನದಿ ತೀರದ ವ್ಯಾಪ್ತಿಯಲ್ಲಿ ಬರುವ ಸಿಂಧನೂರು, ಮಾನವಿ, ರಾಯಚೂರು ತಾಲೂಕುಗಳ 33 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಈಗಾಗಲೇ ನೀರು ಸಿಂಧನೂರು ತಾಲೂಕಿನ ದಢೇಸೂಗೂರು ಸೇತುವೆ ಬಳಿ ಅಪಾರ ಪ್ರಮಾಣದಲ್ಲಿ ಹರಿಯುತ್ತಿದೆ. ಸಿಂಧನೂರು ತಾಲೂಕಿನ ಹೊಲ-ಗದ್ದೆಗಳಲ್ಲಿ ನೀರು ನುಗ್ಗುವ ಆತಂಕವಿದೆ. ಅಲ್ಲದೇ ನದಿ ಪಾತ್ರದ ಗ್ರಾಮಸ್ಥರಿಗೆ ನದಿಗೆ ತೆರಳದಂತೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಡಂಗೂರ ಸಾರಲಾಗುತ್ತಿದೆ.
ಕೃಷ್ಣಾ ಪ್ರವಾಹದಲ್ಲಿ: ಜಿಲ್ಲೆಯ ಬಲ ಭಾಗದಲ್ಲಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ ಹೆಚ್ಚಳವಾಗಿದೆ. ಬೆಳಗ್ಗೆ 11 ಗಂಟೆಗೆ ನಾರಾಯಣಪುರ ಜಲಾಶಯದ ಒಳಹರಿವು 2.80 ಲಕ್ಷ ಕ್ಯೂಸೆಕ್ ನಷ್ಟಿತ್ತು. ಇದರಿಂದ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ, ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆಗಳು, ರಾಯಚೂರು ತಾಲೂಕಿನ ಗುರ್ಜಾಪುರ ಗ್ರಾಮದ ಬಳಿಯ ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆ ಹಂತಕ್ಕೆ ತಲುಪಿದೆ. ನದಿ ಪಾತ್ರದಲ್ಲಿನ ಹೊಲ-ಗದ್ದೆಗಳಲ್ಲಿ ನೀರು ನುಗ್ಗಿದ್ದು, ಗ್ರಾಮಗಳಿಗೂ ಪ್ರವಾಹ ಭೀತಿ ಶುರುವಾಗಿದೆ.