ರಾಯಚೂರು : ಬಿಜೆಪಿಯವರಿಗೆ ಕಾಂಗ್ರೆಸ್ ಮೇಲೆ ಏನಾದರೂ ಹೇಳದೇ ಇದ್ದರೆ ತಿಂದ ಊಟ ಜೀರ್ಣವಾಗುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಲೇವಡಿ ಮಾಡಿದರು. ರಾಯಚೂರು ಜಿಲ್ಲೆಯ ಸಿಂಧನೂರು ಕೇಂದ್ರೀಯ ಬಸ್ ನಿಲ್ದಾಣದಲ್ಲಿ 'ಕಲ್ಯಾಣ ರಥ' ಮಲ್ಟಿ ಎಕ್ಸಲ್ ವೋಲ್ವೋ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿರುವ ಕುರಿತು ಪ್ರತಿಕ್ರಿಯಿಸಿ, ಕಾನೂನು ವ್ಯವಸ್ಥೆ ಚೆನ್ನಾಗಿದೆ. ಬೊಮ್ಮಾಯಿಯವರು ವಿರೋಧ ಪಕ್ಷದಲ್ಲಿದ್ದಾರಲ್ಲ, ಏನೋ ಮಾತಾಡ್ಬೇಕು ಮಾತಾಡ್ತಾರೆ. ಅವರಿಗೂ ಎರಡು ವರ್ಷ ಅವಕಾಶ ಸಿಕ್ಕಿತ್ತು. ಸರಿಯಾಗಿ ಆಡಳಿತ ಕೊಟ್ರಾ?. ಒಳ್ಳೆಯ ಆಡಳಿತ ಕೊಟ್ಟಿದ್ದರೆ ಅವರನ್ನೇಕೆ ಜನರು ಮನೆಗೆ ಕಳಿಸ್ತಿದ್ರು?. ನಮ್ಮಲ್ಲಿ ಯಾವುದೇ ತಿಕ್ಕಾಟಗಳಿಲ್ಲ ಎಂದ ಅವರು, ಸುಳ್ಳು ಹೇಳಿ ಹೇಳಿ ಬಿಜೆಪಿಯವರಿಗೆ ರೂಢಿಯಾಗಿದೆ ಎಂದು ಟೀಕಿಸಿದರು.
ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದೆ. ನಾವು ಹೇಳಿದಂತೆ ಐದು ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕನ್ನು ಜಾರಿ ಮಾಡಿದ್ದೇವೆ. ಇನ್ನು ಕೆಲವು ದಿನಗಳಲ್ಲಿ ಇನ್ನೊಂದು ಗ್ಯಾರಂಟಿ ಯೋಜನೆಯನ್ನೂ ಜಾರಿ ಮಾಡುತ್ತೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲೂ ಸಹ ಎಲೆಕ್ಟ್ರಾನಿಕ್ ಬಸ್ ನೀಡುತ್ತೇವೆ. ಹೊಸ ಬಸ್ ಖರೀದಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.