ರಾಯಚೂರು: ನಗರಸಭೆಯನ್ನ ಮಹಾನಗರ ಪಾಲಿಕೆ ಮಾಡಲು ಇಂದು ರಾಯಚೂರು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು. ಕಳೆದ ಎರಡು ವರ್ಷದ ಬಳಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆಯ ನಂತರ ಇಂದು ಮೊದಲ ಸಭೆ ನಡೆಯಿತು.
ನಗರಸಭೆ ಅಧ್ಯಕ್ಷ ಈ. ವಿನಯಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ಮೊದಲ ಅಜೆಂಡವಾಗಿ ರಾಯಚೂರು ನಗರಸಭೆಯನ್ನ ಮಹಾನಗರ ಪಾಲಿಕೆಯಾಗಿ ಮಾಡುವ ಕುರಿತು ವಿಷಯವನ್ನು ಮಂಡಿಸುವ ಮೂಲಕ ಒಪ್ಪಿಗೆ ಸೂಚಿಸಲಾಯಿತು. ಮಹಾನಗರ ಪಾಲಿಕೆಯನ್ನು ಜನಸಂಖ್ಯೆಗೆ ಅನುಗುಣವಾಗಿ ಮಾಡಬೇಕಾದ್ದರಿಂದ, ನಗರದ ಕೂದಲಳತೆ ದೂರದಲ್ಲಿರುವ 20 ಗ್ರಾಮಗಳನ್ನ ಸೇರಿಸುವ ಮೂಲಕ ಪಾಲಿಕೆ ಮಾಡುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕಳುಹಿಸಲಾಗುವುದು ಎಂದು ಅಧ್ಯಕ್ಷರು ಈ ವೇಳೆ ತಿಳಿಸಿದ್ರು.