ರಾಯಚೂರು : ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಭೇಟಿ ನೀಡಿದ್ದ ವೇಳೆ ತಮ್ಮ ಆಳಲು ತೋಡಿಕೊಂಡಿದ್ದ ಮೂವರು ಕಾರ್ಮಿಕರಿಗೆ ಹಟ್ಟಿ ಗೋಲ್ಡ್ ಮೈನಿಂಗ್ ಕಂಪನಿಯ ಪ್ರಭಾರಿ ಹಿರಿಯ ವ್ಯವಸ್ಥಾಪಕ ನೋಟಿಸ್ ಜಾರಿ ಮಾಡಿದ್ದು, ಮೂರು ದಿನಗಳಲ್ಲಿ ಲಿಖಿತ ಉತ್ತರ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೆ, ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಮಿಕರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಹಟ್ಟಿ ಚಿನ್ನದ ಗಣಿಯ ಮೂವರು ಕಾರ್ಮಿಕರು ಅಮಾನತು ತಾಂತ್ರಿಕ ವಿಭಾಗದ ಮಲ್ಲಪ್ಪ, ನಾಗಪ್ಪ, ಸಾಬಣ್ಣ ಎಂಬ ಮೂವರು ಕಾರ್ಮಿಕರನ್ನು ಅಮಾನತುಗೊಳಿಸಲಾಗಿದೆ. ಫೆ. 26ರಂದು ಸಚಿವ ಮುರುಗೇಶ ನಿರಾಣಿ ಭೇಟಿ ನೀಡಿದ್ದ ವೇಳೆ ಕಾರ್ಮಿಕರು ಒಗ್ಗೂಡಿ ಸಮಸ್ಯೆ ಬಗೆಹರಿಸುವಂತೆ ಕೋರಿಕೊಂಡಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಮಿಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.
"ಸಚಿವರು ಮತ್ತು ಕಂಪನಿಯ ಅಧ್ಯಕ್ಷ ಮಾನಪ್ಪ ವಜ್ಜಲ್ಗೆ ಘೇರಾವ್ ಹಾಕಲು ಯತ್ನಿಸಿದ್ದು ಮತ್ತು ಮಾಧ್ಯಮಗಳ ಮುಂದೆ ಮನಸ್ಸಿಗೆ ಬಂದಂತೆ ನೀವು ಹೇಳಿಕೆ ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸ್ಥಾಯಿ ಆದೇಶ 19(4), 19(7), 19(47), 19(51) ಉಲ್ಲಂಘನೆ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಜರುಗಿಸಲಾಗಿದೆ. ಹೀಗಾಗಿ ಮೂರು ದಿನದೊಳಗೆ ಲಿಖಿತ ಉತ್ತರ ನೀಡುವುದು. ಈ ಕೂಡಲೇ ನಿಮ್ಮನ್ನು ಅಮಾನತುಗೊಳಿಸಲಾಗಿದೆ." ಎಂದು ಪ್ರಭಾರಿ ಹಿರಿಯ ವ್ಯವಸ್ಥಾಪಕರು ಮೂವರು ಕಾರ್ಮಿಕರಿಗೆ ನೋಟಿಸ್ನಲ್ಲಿ ಸೂಚಿಸಿದ್ದಾರೆ.
ಓದಿ : ಕುಮಾರ್ ಬಂಗಾರಪ್ಪ ಹೈಡ್ರಾಮಾ ನಡುವೆ ರಾಜ್ಯ ಬಜೆಟ್ ಗುಟ್ಟು ರಟ್ಟು ಮಾಡಿದ ಸಿಎಂ
ಅಧಿಕಾರಿಗಳ ಈ ನಡೆಗೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕಂಪನಿಯಲ್ಲಿ ನಮಗೆ ಬೇಕಾದ ಸೌಲಭ್ಯಗಳನ್ನು ನೀಡುತ್ತಿಲ್ಲ. ನಮ್ಮ ಮಕ್ಕಳಿಗೆ ಉದ್ಯೋಗ ನೀಡುವುದು, ಮೆಡಿಕಲ್ ಬಿಲ್ ಪಾವತಿಸುವುದು ಸೇರಿದಂತೆ ಯಾವುದೇ ನಿಯಮಗಳು ಪಾಲನೆಯಾಗುತ್ತಿಲ್ಲ. ಆದ್ದರಿಂದ, ಸೂಕ್ತ ಸೌಲಭ್ಯ ಕಲ್ಪಿಸಬೇಕೆಂದು ಸಚಿವರಿಗೆ ಒತ್ತಾಯಿಸಿದ್ದೆವು. ಆದರೆ, ಸಮಸ್ಯೆ ಪರಿಹರಿಸಬೇಕಾದ ಅಧಿಕಾರಿಗಳು ನಮ್ಮನ್ನು ಅಮಾನತು ಮಾಡಿದ್ದಾರೆ ಎಂದಿದ್ದಾರೆ.