ರಾಯಚೂರು:ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150Aನಲ್ಲಿ ಲಾರಿ-ಬೊಲೆರೋ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, 18 ಜನ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೋನಾಳ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ. ರಾಯದುರ್ಗ ಮೂಲದ ಹನುಮ್ಮವ ಗುರಿಕಾರ(50), ಚೆನ್ನಮ್ಮ ದುರಗಪ್ಪ(16) ಮೃತ ದುರ್ದೈವಿಗಳು.
ಲಿಂಗಸೂಗೂರು ತಾಲೂಕಿನ ಭೂಪೂರು ಗ್ರಾಮವೊದರ ಪರಂಗಿ ಹಣ್ಣು ತೋಟಕ್ಕೆ ಕೂಲಿ ಕೆಲಸಕ್ಕಾಗಿ ರಾಯದುರ್ಗದಿಂದ 20 ಜನ ಕೂಲಿ ಕಾರ್ಮಿಕರು ತೆರಳಿದ್ದರು. ಕೂಲಿ ಕೆಲಸ ಮುಗಿಸಿಕೊಂಡು ವಾಪಾಸ್ ರಾಯದುರ್ಗಕ್ಕೆ ತೆರಳುವಾಗ ಮಾರ್ಗಮಧ್ಯೆ ಕಕ್ಕೇರಾಯಿಂದ ಸಿಂಧನೂರು ಕಡೆ ಭತ್ತ ಹೊತ್ತು ಸಾಗುತ್ತಿದ್ದ ಲಾರಿ, ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಗಾಯಗೊಂಡವರನ್ನ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗಮಧ್ಯೆ ಹನುಮ್ಮವ ಗುರಿಕಾರ ಹಾಗೂ ಚೆನ್ನಮ್ಮ ದುರಗಪ್ಪ ಮೃತಪಟ್ಟಿದ್ದಾರೆ. ಉಳಿದ 18 ಜನರ ಪೈಕಿ 12 ಜನರಿಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ. 12 ಜನರನ್ನ ಹೆಚ್ಚಿನ ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಉಳಿದ 6 ಜನರಿಗೆ ಲಿಂಗಸೂಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಸಂಬಂಧ ಬೊಲೆರೊ ವಾಹನ ಚಾಲಕ ರಾಯದುರ್ಗದ ಬಲವಂತಪ್ಪ ಹಾಗೂ ಲಾರಿ ಚಾಲಕ ಶಿವಶಂಕ್ರಪ್ಪ ವಿರುದ್ಧ ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದರಿಂದ ಕೆಲ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಪೊಲೀಸರು ಸಂಚಾರವನ್ನ ಸುಗಮಗೊಳಿಸಿದ್ದಾರೆ.