ರಾಯಚೂರು: ಕಳ್ಳತನಕ್ಕೆ ಅಡ್ಡಿಪಡಿಸಿದ ಮಹಿಳೆಯ ಕಿವಿಯನ್ನೇ ಕಳ್ಳರು ಕತ್ತರಿಸಿರುವ ಘಟನೆ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ.
ಮನೆಗಳ್ಳತನಕ್ಕೆ ಅಡ್ಡಿಯಾದ ಮಹಿಳೆಯ ಕಿವಿ ಕತ್ತರಿಸಿದ ಖದೀಮರು ರಾಯಚೂರು ತಾಲೂಕಿನ ಕುಕನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಮಳೆ ಸುರಿಯುತ್ತಿದ್ದ ಹಿನ್ನೆಲೆ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು. ಈ ವೇಳೆ ಖದೀಮರು ಗ್ರಾಮದ ಹನುಮಂತ್ರಾಯ ಎಂಬುವರ ಮನೆಗೆ ನುಗ್ಗಿ ಮನೆಯಲ್ಲಿದ್ದ ನಗದು, ಚಿನ್ನಾಭರಣ, ದಾಖಲೆ ಪತ್ರಗಳನ್ನು ದೋಚಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ ಹೋಗುವಾಗ ಮಹಿಳೆ ಅಡ್ಡಿಪಡಿಸಿದ್ದಕ್ಕೆ ಅವರ ಕಿವಿಯನ್ನೇ ಕತ್ತರಿಸಿ ಪರಾರಿಯಾಗಿದ್ದಾರೆ.
ಆದರೆ ಈ ವೇಳೆ ಕಳ್ಳರ ಗುಂಪಿನವನಾಗಿದ್ದ ಅದೇ ಗ್ರಾಮದ ಯುವಕ ಮನೋಜ್ ಎಂಬಾತನನ್ನು ಗ್ರಾಮಸ್ಥರು ಹಿಡಿದು ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು, ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಕಳ್ಳರ ಈ ತಂಡ ಕಳೆದ ಕೆಲ ದಿನಗಳಿಂದ ಕುಕುನೂರು ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಕಳ್ಳತನ ಮಾಡುತ್ತಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.