ರಾಯಚೂರು: ಕೊರೊನಾ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡುವ ಎಲ್ಲ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಆಕ್ಸಿಜನ್ ಮತ್ತು ರೆಮ್ಡೆಸಿವಿರ್ ಚುಚ್ಚುಮದ್ದಿನ ಕೊರತೆಯಿಲ್ಲ. ವಾರದ ಹಿಂದೆ ಕೊರೊನಾ ಪಾಸಿಟಿವಿಟಿ ಶೇ 36 ರಿಂದ 37ರಷ್ಟಿತ್ತು. ಈಗ ಅದು ಶೇ 30ಕ್ಕೆ ಬಂದಿದ್ದು, ಬರುವ ವಾರದೊಳಗೆ ಶೇ 20ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ. ಜಿಲ್ಲೆಯಲ್ಲಿ ಈವರೆಗೂ 28,980 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. 6,256 ಜನ ಹೋಮ್ ಐಸೋಲೇಷನ್‌ನಲ್ಲಿದ್ದಾರೆ. ರಿಮ್ಸ್, ಒಪೆಕ್ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ 373 ಜನರು ಆಕ್ಸಿಜನ್ ಹಾಸಿಗೆ, 59 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಓದಿ:ಅರ್ಥಪೂರ್ಣ ‘ದಾದಿ’ಯರ ದಿನಕ್ಕೆ ಸಾಕ್ಷಿಯಾದ ರೈನ್ ಬೋ ಆಸ್ಪತ್ರೆ!
ಖಾಸಗಿ ಆಸ್ಪತ್ರೆಗಳಲ್ಲಿ 240 ಜನರು ಆಕ್ಸಿಜನ್ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 27 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯ ಆಕ್ಸಿಜನ್ ಕೊರತೆಯಿಲ್ಲ. ಬೇಡಿಕೆಗೆ ತಕ್ಕಂತೆ ರೆಮ್ಡೆಸಿವಿರ್ ಚುಚ್ಚುಮದ್ದು ಸರಬರಾಜು ಆಗುತ್ತಿದೆ. ಪ್ರಸ್ತುತ 1,004 ಚುಚ್ಚುಮದ್ದುಗಳು ಲಭ್ಯವಿದೆ.18 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದ್ದ ಕೋವಿಡ್ ಲಸಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದ್ದು, ಆನ್‌ಲೈನ್ ನೋಂದಣಿ ಮುಂದುವರಿಯುತ್ತದೆ. ಲಸಿಕೆ ಲಭ್ಯವಾದ ನಂತರ ನೋಂದಣಿ ಮಾಡಿಸಿಕೊಂಡವರಿಗೆ ಲಸಿಕೆ ನೀಡಲಾಗುತ್ತದೆ. 2ನೇ ಡೋಸ್ ಲಸಿಕೆ ಪಡೆಯುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.