ರಾಯಚೂರು :ಮಾಜಿ ಶಾಸಕ ಪ್ರತಾಪ್‌ಗೌಡ ಪಾಟೀಲ್ ಅವರ ಎಲೆಕ್ಷನ್ ಹಾದಿ ಸುಗಮಗೊಂಡಿದೆ. ಮಸ್ಕಿ ತಾಲೂಕುಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರ, ಕಳೆದ 2018ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ಮತದಾನವಾಗಿದೆ ಎಂಬ ಆರೋಪ ಕುರಿತಂತೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ದೂರು ಹಿನ್ನೆಲೆ ವಿಚಾರಣೆ ನಡೆದಿತ್ತು. ಆದರೆ, ನಿನ್ನೆ ನ್ಯಾಯಾಲಯ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದೆ ಅರ್ಜಿಯನ್ನ ವಜಾಗೊಳಿಸಿರುವುದು ಪ್ರತಾಪಗೌಡ ಪಾಟೀಲ್‌ರ ಉಪಚುನಾವಣೆ ಹಾದಿ ಸರಾಗವಾಗಿದೆ.
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನವಾಗಲು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಮುಖ್ಯ ಪಾತ್ರವಹಿಸಿ, ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು ಪ್ರತಾಪ್‌ಗೌಡ. ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಶಾಸಕರ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಿತ್ತು. ಆದರೆ, ಪ್ರತಾಪಗೌಡ ಪಾಟೀಲ್ ವಿರುದ್ಧ ನ್ಯಾಯಾಲಯದಲ್ಲಿನ ದೂರಿನಿಂದಾಗಿ ಮಸ್ಕಿ ಕ್ಷೇತ್ರದಲ್ಲಿ ಮಾತ್ರ ಉಪ ಚುನಾವಣೆ ಈವರೆಗೆ ನಡೆದಿರಲಿಲ್ಲ.
ಕಾಂಗ್ರೆಸ್ನಿಂದ ಗೆಲುವು ಸಾಧಿಸಿದ್ದರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದಾಗಿ ಕಾಂಗ್ರೆಸ್ನಿಂದ ಅನರ್ಹ ಶಾಸಕನೆಂಬ ತೂಗುಗತ್ತಿ ನೆತ್ತಿ ಮೇಲಿತ್ತು. ಆದರೆ, ಅನರ್ಹ ಶಾಸಕ ಎಂಬುವ ದೂರಿನಿಂದ ಪಾರಾದ್ರೂ ಬೈ ಎಲೆಕ್ಷನ್ ನಡೆಯದೆ ಇರುವುದರಿಂದ ಪ್ರತಾಪಗೌಡರಿಗೆ ಅಧಿಕಾರದಿಂದ ದೂರು ಉಳಿಯುವಂತೆ ಮಾಡಿತ್ತು. ನ್ಯಾಯಾಲಯಕ್ಕೆ ದೂರು ನೀಡಿದ್ದ ಬಸನಗೌಡ ತುರುವಿಹಾಳ ಅರ್ಜಿ ವಾಪಸ್ ಪಡೆಯಲು ಮುಂದಾದ್ರೂ ಮತ್ತೊಬ್ಬ ಅಭ್ಯರ್ಥಿ ಬಾಬು ನಾಯಕ ಮಧ್ಯಂತರ ದೂರು ಸಲ್ಲಿಸಿದ್ದರಿಂದ ಪ್ರಕರಣ ಮುಂದುವರೆದಿತ್ತು. ಕೊನೆಗೂ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎನ್ನುವ ವಿಚಾರದಿಂದ ನ್ಯಾಯಾಲಯ ಅರ್ಜಿ ವಜಾಗೊಳಿಸಿದ್ದರಿಂದ ಪ್ರತಾಪಗೌಡರು ನಿಟ್ಟುಸಿರು ಬಿಡುವಂತಾಗಿದೆ.
ಹೀಗಾಗಿ, ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮುಹೂರ್ತ ಫಿಕ್ಸ್ ಆಗಿದೆ. ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ಕಾರಣವಾಗಿರುವ ಪ್ರತಾಪಗೌಡ ಅವರನ್ನ ಗೆಲ್ಲಿಸುವ ಹೊಣೆಯೂ ಬಿಜೆಪಿ ಸರ್ಕಾರದ ಮೇಲೆಯೇ ಹೆಚ್ಚಾಗಿದೆ. ಕ್ಷೇತ್ರ ಪುನರ್ವಿಂಗಡಣೆ ಬಳಿಕ 2008ರಲ್ಲಿ ಮಸ್ಕಿ ವಿಧಾನಸಭೆಗೆನಡೆದ ಚುನಾವಣೆಯಲ್ಲಿ ಪ್ರತಾಪಗೌಡ ಬಿಜೆಪಿಯಿಂದ ಸ್ಪರ್ಧಿಸಿ, ಕಾಂಗ್ರೆಸ್ನ ತಿಮ್ಮಯ್ಯ ನಾಯಕ ವಿರುದ್ಧ 7,643 ಮತಗಳಿಂದ ಗೆಲುವು ಸಾಧಿಸಿದ್ದರು.
2013ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ತಮ್ಮ ಮಾವ ಕೆಜೆಪಿಯ ಮಹಾದೇವಪ್ಪಗೌಡ ವಿರುದ್ಧ 19,147 ಮತಗಳಿಂದ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿಯ ಬಸನಗೌಡ ತುರವಿಹಾಳ ವಿರುದ್ಧ 213 ಅಲ್ಪ ಮತಗಳಿಂದ ವಿಜಯ ಸಾಧಿಸಿದ್ದು, ಪ್ರತಾಪಗೌಡ ವಿರುದ್ಧ ಪರಾಜಿತ ಅಭ್ಯರ್ಥಿ ಬಸನಗೌಡ ತುರವಿಹಾಳ ಚುನಾವಣೆಯಲ್ಲಿ ಅಕ್ರಮ ನಡೆಸಿ ಜಯಗಳಿಸಿದ್ದಾರೆ ಎಂದು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಪ್ರತಾಪಗೌಡ ಪಾಟೀಲ್ ವಿರುದ್ಧ ದೂರು ಸಲ್ಲಿಸಿದ ಬಸನಗೌಡ ತುರವಿಹಾಳಗೆ ಕಾಡಾ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಪಡಿಸುವ ಮೂಲಕ ದೂರು ವಾಪಸ್ ಪಡೆಯುವಂತೆ ಬಿಜೆಪಿ ಮನವೊಲಿಸಲು ಯಶ್ವಸಿಯಾಗಿತ್ತು.