ರಾಯಚೂರು:ಸರ್ಕಾರ ಲಕ್ಷಾಂತರ ರೂಪಾಯಿ ವ್ಯಯಿಸಿ ಯಾವುದೇ ಯೋಜನೆ ಕೈಗೆತ್ತಿಕೊಂಡು ಪೂರ್ಣಗೊಂಡ ನಂತರದಲ್ಲಿ ಯೋಜನೆ ಉದ್ದೇಶ ಈಡೇರಬೇಕು. ಆದರೆ ರಾಯಚೂರಲ್ಲಿ ಅನುದಾನದಲ್ಲಿ ತಾರಾಲಯ ನಿರ್ಮಾಣವಾದರೂ ಅದರ ಉದ್ದೇಶ ಪೂರ್ಣವಾಗಿಲ್ಲ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬಿಸಿಲೂರು ರಾಯಚೂರು ಜಿಲ್ಲೆ ಹಿಂದುಳಿದ ಪ್ರದೇಶವಾಗಿದೆ. ಈ ಭಾಗದ ಯುವ ಸಮೂಹ, ವಿದ್ಯಾರ್ಥಿಗಳ ಸಾರ್ವಜನಿಕರ ಕಲಿಕಾ ಮಟ್ಟ ಸುಧಾರಣೆ ಮಾಡುವ ನಿಟ್ಟಿನಲ್ಲಿ ಹಾಗೂ ವಿಜ್ಞಾನದ ಆಸಕ್ತಿಯನ್ನು ಹೆಚ್ಚಿಸುವುದಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ(ಕೆಕೆಆರ್ ಡಿಬಿ) ಲಕ್ಷಾಂತರ ರೂಪಾಯಿ ಅನುದಾನವನ್ನು ನೀಡುವ ಮೂಲಕ ಪ್ಲಾನೆಟೇರಿಯಂ (ತಾರಾಲಯ) ನಿರ್ಮಾಣ ಮಾಡಲಾಗಿದೆ. ಆದರೆ ಯೋಜನೆ ಉದ್ದೇಶದಂತೆ ನಿರ್ಮಾಣ ಮಾಡದ ಪರಿಣಾಮ ಯಾವುದೇ ಕೆಲಸಕ್ಕೆ ಬರದಂತೆ ಆಗಿದೆ.
ನಗರದ ಹೊರವಲಯದಲ್ಲಿರುವ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ 2016ರಲ್ಲಿ ಕೆಕೆಆರ್‌ಡಿಬಿಯ 55.80 ಲಕ್ಷ ರೂ. ವೆಚ್ಚದಲ್ಲಿ ತಾರಾಲಯ ಕಟ್ಟಡ ಆರಂಭಿಸಿ 2021 ಮಾರ್ಚ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ ಇದನ್ನು ಸಾಮಾನ್ಯ ಕಟ್ಟಡಗಳು, ಶಾಲಾ, ಅಂಗನವಾಡಿ ಕಟ್ಟಡ ನಿರ್ಮಿಸಿದ ಅನುಭವವುಳ್ಳ ಖಾಸಗಿ ಸಂಸ್ಥೆಗೆ ಕಾಮಗಾರಿ ಜವಾಬ್ದಾರಿಯನ್ನು ನೀಡಲಾಗಿತ್ತು. ಮಾಹಿತಿ ಕೊರತೆಯಿಂದ ತಾರಾಲಯ ನಿರ್ಮಾಣದ ವೇಳೆ ನಿಯಮಗಳನ್ನು ಅನುಸರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ್ದ ಕಟ್ಟಡ ಕಳೆದ ಎರಡು ವರ್ಷಗಳಿಂದ ನಿರುಪಯುಕ್ತವಾಗಿದ್ದು, ಅರೆಬರೆ ಕಾಮಗಾರಿ ಮಾಡಿರುವುದರಿಂದ ಇನ್ನೂ ಸಾಕಷ್ಟು ಕೆಲಸ ಬಾಕಿ ಉಳಿದಿದೆ.
ತಾರಾಲಯ ಎನ್ನುವುದು ಒಂದು ಹೊಸಲೋಕದ ಅನುಭವನ್ನು ನೀಡಬೇಕು. ಹೊರಗಿನಿಂದ ಒಳ ಹೋಗುತ್ತಿದ್ದಂತೆ ಹಂತ ಹಂತವಾಗಿ ಕತ್ತಲಾವರಿಸುವಂತಿರಬೇಕು. ಒಳಗಡೆ ಗಾಢಾಂಧಕಾರದಲ್ಲಿ ಮಕ್ಕಳು ಸೌರವ್ಯೂಹದ ಚಿತ್ರಣ ಕಣ್ತುಂಬಿಕೊಳ್ಳುವಂತಿರಬೇಕು. ಆದರೆ, ಇಲ್ಲಿ ನಿರ್ಮಿಸಿದ ಕಟ್ಟಡದಲ್ಲಿ ಆ ರೀತಿಯ ಅನುಭವ ಕಾಣಸಿಗುವುದಿಲ್ಲ. ಜೊತೆಗೆ ಶೌಚಾಲಯದ ವ್ಯವಸ್ಥೆ ಕೂಡ ಮಾಡಿಲ್ಲವೆಂದು ಅಲ್ಲಿನ ಸಿಬ್ಬಂದಿಗಳು ಸಹ ಹೇಳುತ್ತಿದ್ದಾರೆ.