ರಾಯಚೂರು: ಇಲ್ಲಿನ ಲಿಂಗಸುಗೂರು ತಾಲೂಕಿನಲ್ಲಿ ವಾಸವಿರುವ ಅಲೆಮಾರಿ ಜನಾಂಗಕ್ಕೆ ಅಗತ್ಯವಿರುವ ಆಹಾರ ಧಾನ್ಯ ಹಾಗೂ ಮೂಲಭೂತ ಸೌಕರ್ಯ ಒದಗಿಸುವಂತೆ ಕೋರಿ ಪ್ರತಿಭಟನೆ ನಡೆಸಲಾಗಿದೆ.
ಪಡಿತರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ - ಊಟಕ್ಕೆ ಪರದಾಟ
ಲಾಕ್ಡೌನ್ ಆದೇಶದಿಂದಾಗಿ ದಿನಗೂಲಿ ಕಾರ್ಮಿಕರಿಗೆ ಇನ್ನಿಲ್ಲದ ಸಮಸ್ಯೆ ಎದುರಾಗಿದೆ. ಈ ನಡುವೆ ಲಿಂಗಸುಗೂರಿನಲ್ಲಿ ವಾಸವಿರುವ ಅಲೆಮಾರಿ ಜನಾಂಗ ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ತಲುಪಿದೆ. ತಾಲೂಕು ಆಡಳಿತ ಪಡಿತರ ಆಹಾರ ಧಾನ್ಯ ವಿತರಿಸುವ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಅಲೆಮಾರಿ ಜನಾಂಗದ ಕುಟುಂಬ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ತಾಲೂಕು ಆಡಳಿತ ಪಡಿತರ ಆಹಾರಧಾನ್ಯ ನೀಡದಿರುವುದನ್ನು ವಿರೋಧಿಸಿ ಮಂಗಳವಾರ ಅಲೆಮಾರಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ಲಿಂಗಸುಗೂರು ಪಟ್ಟಣದ ವಾರ್ಡ್ ನಂಬರ್ 5ರಲ್ಲಿ ವಾಸಿಸುವ ಅಲೆಮಾರಿಗಳು, ವೇಷಗಾರಿಕೆ, ದುರುಗ-ಮುರುಗಮ್ಮ ಸೇರಿದಂತೆ ವಿವಿಧ ಕಲೆಗಳನ್ನು ಪ್ರದರ್ಶಿಸಿದರು. ಕೆಲವರು ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು, ಇನ್ನೂ ಕೆಲವರು ಭಿಕ್ಷೆ ಬೆಡುತ್ತಾ ಬದುಕು ನಡೆಸುತ್ತಿದ್ದಾರೆ.
ಕೊರೊನಾ ಭೀತಿಯಿಂದ ಬೀದಿಗೆ ಇಳಿಯದಂತೆ ಸೂಚಿಸಿದ್ದರಿಂದ ಒಪ್ಪತ್ತಿನ ಊಟಕ್ಕೂ ಪರದಾಟ ನಡೆಸುವಂತಾಗಿದೆ. ಪಡಿತರ ಕೊಡಿಸಿ ಇಲ್ಲವೆ ಊಟದ ವ್ಯವಸ್ಥೆ ಮಾಡಿಕೊಡುವಂತೆ ಮಹಿಳೆಯರು ಮಕ್ಕಳ ಸಮೇತ ಸಹಾಯಕ ಆಯುಕ್ತರ ಕಚೇರಿ ಮುಂದೆ ಕುಳಿತಿದ್ದರು. ತಹಶೀಲ್ದಾರ್ ಚಾಮರಾಜ ಪಾಟೀಲ ಅಲೆಮಾರಿಗಳ ಸಂಕಷ್ಟ ಕೇಳಿ ವಾರ್ಡ್ ನಂಬರ್ 5ರ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ದೂರವಾಣಿ ಮೂಲಕ ಮಾತನಾಡಿ ಕುಟುಂಬಗಳನ್ನು ಗುರುತಿಸಿ ಪಡಿತರ ನೀಡಲು ಸೂಚಿಸಿದ್ದಾರೆ.