ರಾಯಚೂರು: ಈ ತಿಂಗಳ ಅಂತ್ಯಕ್ಕೆ ಜಿಲ್ಲೆಗೆ ಕೊರೊನಾ ಲಸಿಕೆ ಲಭ್ಯವಾಗಲಿದ್ದು, ಲಸಿಕೆ ಸಂಗ್ರಹಕ್ಕೆ ಆರೋಗ್ಯ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಕೃಷ್ಣ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಸಾ) ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಲಸಿಕೆ ಈ ತಿಂಗಳ ಅಂತ್ಯಕ್ಕೆ ಜಿಲ್ಲೆಗೆ ಲಭ್ಯವಾಗಲಿದ್ದು, ಅದರ ಸಂಗ್ರಹಕ್ಕೆ ನಗರ ಹಾಗೂ ತಾಲೂಕು ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆಯನ್ನು ಆರೋಗ್ಯ ಇಲಾಖೆ ಮಾಡಿಕೊಂಡಿದೆ. ಸರ್ಕಾರದ ಮಾರ್ಗಸೂಚಿಯನ್ವಯ ಲಸಿಕೆಯನ್ನು ಪ್ರತಿ ದಿನ ನೂರು ಜನರಿಗೆ ನೀಡಲು ಅಗತ್ಯ ಸೌಕರ್ಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದ್ದು, ಸರ್ಕಾರಿ ಶಾಲೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂರು ಕೋಣೆಗಳನ್ನು ಗುರುತಿಸಲಾಗಿದೆ. ಒಂದು ಕೋಣೆಯಲ್ಲಿ ನೋಂದಣಿ, ಒಂದು ಕೋಣೆಯಲ್ಲಿ ಲಸಿಕೆ, ಒಂದು ಕೋಣೆಯಲ್ಲಿ ವಿಶ್ರಾಂತಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.