ರಾಯಚೂರು:''ಕಾಂಗ್ರೆಸ್ ಇಲ್ಲಿಯವರೆಗೂ ಒಡೆದಾಳುವ ನಿಯಮ ಅನುಸರಿಸಿಕೊಂಡು ಬಂದಿದೆ'' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಳಿ ನಡೆಸಿದರು. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಿಣಿ ಬ್ರಿಡ್ಜ್ ಬಳಿ ಶ್ರೀಕಾಗಿನೆಲೆ ಕನಕಗುರು ಪೀಠದಲ್ಲಿ ಇಂದಿನಿಂದ ಮೂರು ದಿನಗಳ ಆಯೋಜಿಸಿರುವ ಹಾಲುಮತ ಸಂಸ್ಕೃತಿ ವೈಭವ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿದರು.
ಈ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಾಮಮಂದಿರ ಹೋರಾಟದ ಸಂದರ್ಭದಲ್ಲಿ ಅಮಾಯಕ ಹಿಂದೂಗಳ ಮೇಲೆ ಅನಗತ್ಯ ಲಾಠಿ ಚಾರ್ಜ್, ಗೋಲಿಬಾರ್ ಮಾಡಿಸಿದ್ದು ಕಾಂಗ್ರೆಸ್ನವರು. ನೀವು ವೋಟ್ ಬ್ಯಾಂಕ್ ರಾಜಕಾರಣವನ್ನು ನಿರಂತರವಾಗಿ ಮಾಡುತ್ತಲೇ ಬರುತ್ತಿದ್ದೀರಿ'' ಎಂದು ಅವರು ಕಿಡಿಕಾರಿದರು.
''ರಾಮಮಂದಿರದ ಭೂಮಿ ಪೂಜೆ ನೆರವೇರಿಸಿದ್ದ ದಿನವೇ, ಜನವರಿ 22 ರಂದು ಉದ್ಘಾಟನೆ ಮಾಡಲಾಗುವುದು ಎಂದು ಮೊದಲೇ ತೀರ್ಮಾನ ಆಗಿದೆ. ಜನ್ಮಭೂಮಿ ಟ್ರಸ್ಟ್ನವರು ತಿಳಿಸಿದ್ದಾರೆ. ಅದು ಅಪೂರ್ಣ ಇದೆ ಎನ್ನವುದು ಕಾಂಗ್ರೆಸ್ ಪಕ್ಷದವರಿಗೆ ಹೇಗೆ ಗೊತ್ತಿದೆ. ಗರ್ಭಗುಡಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ಆದಷ್ಟು ಬೇಗ ಅಲ್ಲಿನ ಕೆಲಸ ಮುಗಿಯುತ್ತದೆ'' ಎಂದು ತಿಳಿಸಿದರು.
''ಕಾಂಗ್ರೆಸ್ ಪಕ್ಷವು ತುಷ್ಠೀಕರಣದ ರಾಜಕಾರಣ ಮಾಡುತ್ತಿದೆ. ಸೋಮನಾಥ ಮಂದಿರ ಉದ್ಘಾಟನೆ ಆಗಬೇಕಾದರೆ ಏನು ಮಾಡಿದ್ರು, ಅಂದಿನ ರಾಷ್ಟ್ರಪತಿಗಳನ್ನು ದೇವಸ್ಥಾನದ ಉದ್ಘಾಟನೆಗೆ ಹೋಗಬಾರದು ಎಂದಿದ್ದರು. ಕಾಂಗ್ರೆಸ್ ಪಕ್ಷದ ಮೆಂಟಾಲಿಟಿ ಹೇಗಿದೆ ಅಂದ್ರೆ, ರಾಮ ಕಾಲ್ಪನಿಕ ವ್ಯಕ್ತಿ ಅನ್ನೋದು. ಕರಸೇವಕರ ಮೇಲೆ ಕೇಸ್ ಹಾಕಿದ್ದು, ಗೋಲಿಬಾರ್ ಮಾಡಿದ್ದು ಯಾರು? ಕಾಂಗ್ರೆಸ್ ಪಕ್ಷ ಎಂದಿಗೂ ಹಿಂದೂ ವಿರೋಧ ನೀತಿಯನ್ನು ಅನುಸರಿಸುತ್ತದೆ. ಕಾಂಗ್ರೆಸ್ನವರು ತುಷ್ಟೀಕರಣದ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಕಾಂಗ್ರೆಸ್ ಪಕ್ಷದ ಕಪೋಲ ಕಲ್ಪಿತ ಆರೋಪಗಳಿಗೆ ನಾನು ಉತ್ತರ ಕೊಡುವುದಿಲ್ಲ'' ಎಂದು ಕಿಡಿಕಾರಿದರು.