ರಾಯಚೂರು :ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೂರು ತಿದ್ದುಪಡಿ ಕಾಯ್ದೆಗಳ ಅನುಮೋದನೆ ಅಸಂವಿಧಾನಿಕವಾಗಿದೆ. ರೈತ ವಿರೋಧಿ ಕಾಯ್ದೆಗಳ ಕುರಿತು ಪುನರ್ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ಕರಿಯಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್ ಆರ್ ಹೀರೆಮಠ ಹೇಳಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ರೈತಪರ ಸಂಘಟನೆಗಳ ಸಹಯೋಗದಲ್ಲಿ ನಡೆದ ರಸ್ತೆ ತಡೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಒಂದು ಪ್ರಾಂತ್ಯದ ರೈತರದ್ದಲ್ಲ, ಇಡೀ ದೇಶದ ರೈತರ ಹೋರಾಟವಾಗಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ತಿದ್ದುಪಡಿ ಕಾಯ್ದೆ ರಾಜ್ಯಸಭೆಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಿದೆ.
ಧ್ವನಿ ಮತದ ಮೂಲಕ ಅನುಮೋದನೆ ಪಡೆದಿರುವುದು ಅಸಂವಿಧಾನಿಕವಾಗಿದ್ದು, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಡುವ ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳ ಕುರಿತು ಸುದೀರ್ಘ ಚರ್ಚೆಗಾಗಿ ವಿಶೇಷ ಅಧಿವೇಶನ ಕರೆದು ತಿದ್ದುಪಡಿ ಕಾಯ್ದೆಗಳ ಕುರಿತು ಪುನರ್ ಪರಿಶೀಲನೆ ಮಾಡಬೇಕು. ರೈತರ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಕಾಯ್ದೆ ರೂಪ ನೀಡಬೇಕು ಎಂದು ಒತ್ತಾಯಿಸಿದರು.
ರೈತಪರ ಸಂಘಟನೆಗಳ ಸಹಯೋಗದಲ್ಲಿ ನಡೆದ ರಸ್ತೆ ತಡೆ ಪ್ರತಿಭಟನೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವ ಅಧ್ಯಕ್ಷ ಚಾಮರಸ್ ಮಾಲೀ ಪಾಟೀಲ ಮಾತನಾಡಿ, ಯಾವುದೇ ಚರ್ಚೆ ಇಲ್ಲದೆ ಅನುಮೋದನೆ ಪಡೆದು ಜಾರಿಗೊಳಿಸಿರುವ ರೈತ ವಿರೋಧಿ ಕಾಯ್ದೆ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ.
ರೈತಮುಖಂಡರ ಸಭೆಯಲ್ಲಿ ಕೇಂದ್ರ ಸರ್ಕಾರ ಸರಿಯಾಗಿ ನಡೆದುಕೊಳ್ಳುತ್ತಿಲ್ಲ, ಜಾರಿಯಾದ ಮೂರು ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.