ರಾಯಚೂರು:ಕಳೆದ ಮೂರ್ನಾಲ್ಕು ದಿನಗಳಲ್ಲಿ ಸುಮಾರು 70 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ರಾಯಚೂರು ತಾಲೂಕಿನ ತಲಮಾರಿ ಗ್ರಾಮವನ್ನ 15 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.
ಕೊರೊನಾ ಆರ್ಭಟ: ರಾಯಚೂರಿನ ತಲಮಾರಿ ಗ್ರಾಮ 15 ದಿನಗಳ ಕಾಲ ಸೀಲ್ ಡೌನ್
ರಾಯಚೂರು ತಾಲೂಕಿನ ತಲಮಾರಿ ಗ್ರಾಮವನ್ನ 15 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದ್ದು, ಕೃಷಿ ಚಟುವಟಿಕೆಗೆ ಮಾತ್ರ ಅನುಮತಿ ನೀಡಲಾಗಿದೆ.
ಇಂದಿನಿಂದ 15 ದಿನಗಳ ಕಾಲ ತಲಮಾರಿ ಗ್ರಾಮವನ್ನ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದ್ದು, ಕೃಷಿ ಚಟುವಟಿಕೆಗೆ ಮಾತ್ರ ಅನುಮತಿ ನೀಡಲಾಗಿದೆ. ಗ್ರಾಮದಲ್ಲಿ 16 ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ. ಕೃಷಿ ಚಟುವಟಿಕೆಗೆ ಉಪಯೋಗಿಸಿದ ಯಂತ್ರೋಪಕರಣಗಳನ್ನು ಗ್ರಾಮಕ್ಕೆ ಮರಳಿ ತೆಗೆದುಕೊಂಡು ಹೋಗಬಾರದು. ಬದಲಾಗಿ ಜಮೀನಿನಲ್ಲಿ ಇರಿಸಬೇಕೆಂದು ಸೂಚಿಸಲಾಗಿದೆ. ಗ್ರಾಮವನ್ನೇ ಸೀಲ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸಿದರು. ಅನವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ. ಸೋಂಕು ನಿಯಂತ್ರಣಕ್ಕೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.