ಕರ್ನಾಟಕ

karnataka

ETV Bharat / state

ಹಳ್ಳಿ ಪ್ರತಿಭೆಯ ಶ್ರಮಕ್ಕೆ ತಕ್ಕ ಪ್ರತಿಫಲ... ಕೂಲಿ ಮಾಡುವ ದಂಪತಿ ಪುತ್ರ ಈಗ ತಹಶೀಲ್ದಾರ್​​​​! - Tahsildar Tirupati V Patil Amid Poverty

ಸಮಯ ಪ್ರಜ್ಞೆ, ಸತತ ಪ್ರಯತ್ನ, ದೃಢನಂಬಿಕೆ, ಸಾಧಿಸುವ ಛಲ... ಇವೆಲ್ಲವೂ ಇದ್ರೆ ಅದೆಂಥದೇ ಸಾಧನೆಯನ್ನಾದ್ರೂ ಮಾಡೋಕೆ ಸಾಧ್ಯ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯಲಗಟ್ಟಾ ಗ್ರಾಮದ ತಿರುಪತಿ ವಿ. ಪಾಟೀಲ್ ಅದನ್ನ ಸಾಬೀತು ಮಾಡಿ ತೋರಿಸಿದ್ದಾರೆ.

tahsildar-tirupati-v-patil
ಕೂಲಿ ಕೆಲಸದ ದಂಪತಿ ಪುತ್ರ ತಹಶೀಲ್ದಾರ್

By

Published : Dec 27, 2019, 11:05 PM IST

ರಾಯಚೂರು:ಬಡತನ ಸಾಧಿಸೋದಕ್ಕೆ ಅಡ್ಡಿಯಾಗೋದಿಲ್ಲ ಅನ್ನೋದು ಹಲವು ಬಾರಿ ಸಾಬೀತಾಗಿದೆ. ರಾಯಚೂರಿನ ಹಳ್ಳಿ ಪ್ರತಿಭೆಯೊಂದು ಎಲ್ಲಾ ಕೊರತೆಗಳ ಮಧ್ಯೆ ಸತತ ಪರಿಶ್ರಮದಿಂದ ತಹಶೀಲ್ದಾರ್‌ ಆಗ್ಬೇಕೆಂಬ ಕನಸನ್ನ ನನಸಾಗಿಸಿಕೊಂಡಿದೆ.

ಸಮಯ ಪ್ರಜ್ಞೆ, ಸತತ ಪ್ರಯತ್ನ, ದೃಢನಂಬಿಕೆ, ಸಾಧಿಸುವ ಛಲ... ಇವೆಲ್ಲವೂ ಇದ್ರೆ ಅದೆಂಥದೇ ಸಾಧನೆಯನ್ನಾದ್ರೂ ಮಾಡೋಕೆ ಸಾಧ್ಯ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯಲಗಟ್ಟಾ ಗ್ರಾಮದ ತಿರುಪತಿ ವಿ. ಪಾಟೀಲ್ ಅದನ್ನ ಸಾಬೀತು ಮಾಡಿ ತೋರಿಸಿದ್ದಾರೆ. ವಡಿಕೆಪ್ಪ-ದೇವಮ್ಮ ದಂಪತಿಯ ಹಿರಿಯ ಪುತ್ರ ತಿರುಪತಿ ಈಗ ತಹಶೀಲ್ದಾರ್‌ ಆಗ್ತಿದ್ದಾರೆ. ಬಡತನ ಮೆಟ್ಟಿ ಸಾಧನೆಯ ಶಿಖರ ಏರಿದ್ದಾರೆ. ತಿರುಪತಿಯವರ ಹೆತ್ತವರಿಗೆ ಸ್ವಂತ ಜಮೀನಿಲ್ಲ. ಕೂಲಿ ಮಾಡಿ ಮಕ್ಕಳನ್ನ ಬೆಳೆಸಿದ್ದಾರೆ. ಹೆತ್ತವರ ಕಷ್ಟಗಳನ್ನು ಕಣ್ಣಾರೆ ಕಂಡ ಕಾರಣವೋ ಏನೋ ಹಿರಿಯ ಮಗನಿಗೆ ಸಾಧಿಸುವ ಛಲ ಬಂದುಬಿಟ್ಟಿತ್ತು.

ತಿರುಪತಿ ವಿ. ಪಾಟೀಲ್ ಬೆಳೆದು ಬಂದ ಹಾದಿ:

ಕೂಲಿ ಮಾಡುವ ದಂಪತಿ ಪುತ್ರ ಈಗ ತಹಶೀಲ್ದಾರ್
ಹುಟ್ಟೂರು ಯಲಗಟ್ಟಾದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 1ರಿಂದ 10ನೇ ತರಗತಿ ಓದು. ಪಿಯುಸಿ ಬಳಿಕ ಡಿಎಡ್ ಜತೆಗೆ ಪದವಿ ಕೂಡ ಪಡ್ಕೊಂಡಿದ್ದ ತಿರುಪತಿ ಅವರು ಎಂಎ ಅರ್ಥಶಾಸ್ತ್ರ ಪದವಿಯನ್ನು ದೂರ ಶಿಕ್ಷಣದ ಮೂಲಕ ಪಡೆದಿದ್ದಾರೆ. 3 ವರ್ಷ ಲಿಂಗಸುಗೂರಿನ ಡಾ. ಬಿ.ಆರ್.ಅಂಬೇಡ್ಕರ್ ವಸತಿ ನಿಲಯದಲ್ಲಿದ್ದುಕೊಂಡು ಪದವಿ ಮುಗಿಸುವಾಗಲೇ ತಹಶೀಲ್ದಾರ್ ಆಗ್ಬೇಕೆಂಬ ಕನಸು ಕಂಡಿದ್ದರು. ಹಾಗೆ ಕನಸು ಬಿತ್ತಿದ್ದವರು ಹಾಸ್ಟೆಲ್‌ ಮೇಲ್ವಿಚಾರಕ ಶಿವಪ್ಪ, ಕಾಲೇಜಿನ ಆಡಳಿತ ಅಧಿಕಾರಿ ಬಸವಂತರಾಯ ಕುರಿ, ಪ್ರಾಚಾರ್ಯ ಹೆಚ್.ಎಲ್.ಪವಾರ್ ಹಾಗೂ ಉಪನ್ಯಾಸಕರಂತೆ. ಬೆನ್ನು ತಟ್ಟಿ ಆಡಿದ ಆ ಉತ್ಸಾಹದ ನುಡಿಗಳಿಂದ ಪ್ರೇರಿತನಾಗಿ ಈಗ ತಹಶೀಲ್ದಾರ್ ಆಗಿರುವೆ ಅಂತಾರೆ ತಿರುಪತಿ ವಿ. ಪಾಟೀಲ್.

ತಹಶೀಲ್ದಾರ್‌ ಆಗುವ ಮೊದಲು ವಿವಿಧ ಹುದ್ದೆಗಳು:
ಎದೆಗೆ ಬಿದ್ದ ಅಕ್ಷರ ಇವರಿಗೆ ಫಲ ಕೊಟ್ಟಿದೆ. ಮೊದಲಿಗೆ ಎಸ್‌ಡಿಎ ಹುದ್ದೆ ಗಿಟ್ಟಿಸಿದ್ದರು. ಬಳಿಕ ಎಫ್‌ಡಿಎ (2 ಬಾರಿ), ಕಂದಾಯ ನಿರೀಕ್ಷಕ, ಚೀಪ್ ಆಫೀಸರ್ ಗ್ರೇಡ್-2, ಮಾರ್ಕೆಟಿಂಗ್ ಅಸಿಸ್ಟೆಂಟ್, ವಸತಿ ಶಾಲೆಯ ಶಿಕ್ಷಕ, ಅಬಕಾರಿ ರಕ್ಷಕ ಹಾಗೂ ಅಬಕಾರಿ ಉಪ ನಿರೀಕ್ಷಕ ಹುದ್ದೆಗಳಿಗೂ ತಿರುಪತಿ ಆಯ್ಕೆಯಾಗಿದ್ದರು. 2 ವರ್ಷ ಧಾರವಾಡದ ಹಲವಾರು ಪ್ರತಿಷ್ಠಿತ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳಲ್ಲಿ ಅರ್ಥಶಾಸ್ತ್ರ ಮತ್ತು ಭೂಗೋಳ ಶಾಸ್ತ್ರದ ಉಪನ್ಯಾಸಕರಾಗಿದ್ದರು. ವಿಷಯವನ್ನ ಸರಳೀಕರಿಸಿ ಬೋಧಿಸಿದ ಪರಿಣಾಮ ಅಪಾರ ಶಿಷ್ಯ ಬಳಗ ಕೂಡ ಹೊಂದಿದ್ದಾರೆ. ಪ್ರಸ್ತುತ ಹಾವೇರಿ ಜಿಲ್ಲೆ ಹಿರೇಕೆರೂರು ರೇಂಜ್‌ನ ಅಬಕಾರಿ ಉಪ ನಿರೀಕ್ಷಕರಾಗಿರುವ ತಿರುಪತಿ ಅವರು ತಮ್ಮ 2ನೇ ಪ್ರಯತ್ನದಲ್ಲಿ ಕೆಎಎಸ್ ಪರೀಕ್ಷೆಯಲ್ಲಿ 1083 ಅಂಕ ಪಡೆದು 43ನೇ
ರ‌್ಯಾಂಕ್​​ನೊಂದಿಗೆ ತಹಶೀಲ್ದಾರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಕಷ್ಟ ಕಾಲದಲ್ಲಿ ನೆರವಾದ ಸಹೋದರರು, ಸ್ನೇಹಿತರು ಹಾಗೂ ಶಿಕ್ಷಕರಿಗೆಲ್ಲ ಋಣಿ ಅಂತಾ ಹೇಳುವ ತಿರುಪತಿ, ತಾವು ಬೆಳೆದು ಬಂದ ಹಾದಿ ಮರೆತಿಲ್ಲ. ಹಳ್ಳಿ ಪ್ರತಿಭೆಗಳಿಗೆ ಇವರ ಯಶಸ್ಸು ಸ್ಫೂರ್ತಿಯಾಗಲಿ.

ABOUT THE AUTHOR

...view details