ರಾಯಚೂರು: ಐದು ವರ್ಷದ ಬಾಲಕಿಯೋರ್ವಳಿಗೆ ಶಂಕಿತ ಝಿಕಾ ವೈರಸ್ ಪತ್ತೆಯಾಗಿದೆ. ಜಿಲ್ಲೆಯ ಮಾನವಿ ತಾಲೂಕಿನ ಕೋಳಿ ಕ್ಯಾಂಪ್ನಲ್ಲಿ ಈ ವೈರಸ್ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಕೋಳಿ ಕ್ಯಾಂಪ್ ನಿವಾಸಿಯೊಬ್ಬರ ನಾಗರಾಜ ಅವರ ಪುತ್ರಿಯಲ್ಲಿ ಶಂಕಿತ ಝಿಕಾ ವೈರಸ್ ಪತ್ತೆಯಾಗಿದ್ದು, ಚಿಕಿತ್ಸೆಯಿಂದ ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ.
ಕೆಲ ದಿನಗಳ ಹಿಂದೆ ಬಾಲಕಿಗೆ ಜ್ವರ, ನೆಗಡಿ ಕೆಮ್ಮು, ಸೇರಿದಂತೆ ಅನಾರೋಗ್ಯ ಉಂಟಾಗಿತ್ತು. ಈ ವೇಳೆ, ಪೋಷಕರು ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆಗಾಗಿ ತೋರಿಸಿದ್ದರು. ಅಲ್ಲಿನ ವೈದ್ಯರು ಸಿಂಧನೂರಿಗೆ ಚಿಕಿತ್ಸೆಗೆ ತೆರಳುವಂತೆ ಹೇಳಿದ್ದರು. ಅಲ್ಲಿನ ಚಿಕಿತ್ಸೆ ಫಲಕಾರಿಯಾಗದ ಕಾರಣ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಈ ವೇಳೆ, ಬಾಲಕಿಗೆ ರಕ್ತ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಲಾಗಿದ್ದು, ಡೆಂಗ್ಯೂ ಮಾದರಿಯ ಶಂಕಿತ ಝಿಕಾ ವೈರಸ್ ಪತ್ತೆಯಾಗಿದೆ. ಇದಾದ ಬಳಿಕ ಚಿಕಿತ್ಸೆ ನೀಡಲಾಗುತ್ತಿದ್ದು, ಬಾಲಕಿ ಚಿಕಿತ್ಸೆಯಿಂದ ಗುಣಮುಖವಾಗುತ್ತಿದ್ದಾಳೆ.