ರಾಯಚೂರು: ಗುಲಬರ್ಗಾ ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿಂದು ನಡೆದ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವದಲ್ಲಿ ತಾಲೂಕಿನ ಪೂರತಿಪ್ಲಿ ಗ್ರಾಮದ ವಿದ್ಯಾರ್ಥಿನಿ ಲಕ್ಷ್ಮೀ ರಾಜ್ಯಶಾಸ್ತ್ರ ವಿಭಾಗದಲ್ಲಿ 6 ಚಿನ್ನದ ಪದಕ ಪಡೆದಿದ್ದಾರೆ. ಇವರು ಲಕ್ಷ್ಮಣ ನಾಯಕ್ ಮತ್ತು ನರಸಮ್ಮ ದಂಪತಿಯ ಪುತ್ರಿಯಾಗಿದ್ದು, ಬಡತನದ ನಡುವೆಯೂ ರಾಜ್ಯಶಾಸ್ತ್ರ ವಿಭಾಗಕ್ಕೆ ಪ್ರಥಮ ಸ್ಥಾನ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತಮ್ಮ ಸಾಧನೆ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮೀ, "ಮನೆಯಲ್ಲಿ ಬಡತನವಿದ್ದರೂ ಕುಟುಂಬದ 5 ಮಕ್ಕಳ ಓದಿಗೆ ಬೆಂಬಲವಾಗಿ ನಿಂತರುವ ನನ್ನ ತಂದೆಯೇ ಈ ಸಾಧನೆಗೆ ಸ್ಫೂರ್ತಿ" ಎಂದು ತನ್ನ ತಂದೆಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ, ಪ್ರೌಢ ಶಿಕ್ಷಣ ಹಾಗೂ ಪಿಯುಸಿಯನ್ನು ಹತ್ತಿರದ ಮಟಮಾರಿ ಹಾಗೂ ಪದವಿ ಶಿಕ್ಷಣವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಬಿ.ಎಡ್ ಶಿಕ್ಷಣವನ್ನು ನಂದಿನಿ ಮಹಾವಿದ್ಯಾಲಯದಲ್ಲಿ ಮುಗಿಸಿ, ಟಿಇಟಿ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದು ತೇರ್ಗಡೆಗೊಂಡಿದ್ದಾರೆ.
ಪೋಷಕರೊಂದಿಗೆ 6 ಚಿನ್ನದ ಪದಕ ಪಡೆದ ಲಕ್ಷ್ಮೀ ಎಂ.ಎ ರಾಜ್ಯಶಾಸ್ತ್ರವನ್ನು ಯರಗೇರಾ ಪಿ.ಜಿ ಸೆಂಟರ್ನಲ್ಲಿ ವಿದ್ಯಾಭ್ಯಾಸ ಮಾಡಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ಕುಟುಂಬಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅಲ್ಲದೇ ಎಂ.ಎ ವಿದ್ಯಾಭ್ಯಾಸ ಮಾಡುವಾಗಲೇ ಕೆ- ಸೆಟ್ ಪಾಸಾಗುವ ಮೂಲಕ ಮುಂದೆ ರಾಜ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿಯಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಒಟ್ಟಿನಲ್ಲಿ ಸಾಧನೆಗೆ ನಿರಂತರ ಪರಿಶ್ರಮ, ಛಲ, ಗುರುಗಳ ಮಾರ್ಗದರ್ಶನವಿದ್ದರೆ ಸಾಕು ಏನಾದರೂ ಸಾಧಿಸಬಹುದು ಎಂಬುದಕ್ಕೆ ಇವರು ಸಾಕ್ಷಿಯಾಗಿದ್ದಾರೆ.
ಇದನ್ನೂ ಓದಿ:5,000 ಮಹಿಳೆಯರಿಂದ ಅಂಗಾಂಗ ದಾನಕ್ಕೆ ನಿರ್ಧಾರ: ಸ್ವಾತಂತ್ರ್ಯೋತ್ಸವದಂದು ಒಪ್ಪಿಗೆ ಪತ್ರ ಸಲ್ಲಿಕೆ
14 ಚಿನ್ನದ ಪದಕ ಪಡೆದ ರುಕ್ಮಿಣಿ:ಇನ್ನು ಕಲಬುರಗಿ ತಾಲೂಕಿನ ಆಲಗೂಡ ಮೂಲದ ಎಂ.ಎ ಕನ್ನಡ ವಿಭಾಗದ ವಿದ್ಯಾರ್ಥಿನಿ ರುಕ್ಮಿಣಿ ಹಣಮಂತ್ರಾಯ 14 ಚಿನ್ನದ ಪದಕ ಪಡೆದು ವಿವಿಯಲ್ಲಿಯೇ ಅತೀ ಹೆಚ್ಚು ಚಿನ್ನದ ಪದಕ ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ. ತಮ್ಮ ಸಾಧನೆ ಬಗ್ಗೆ ಪ್ರತಿಕ್ರಿಯಿಸಿದ ರುಕ್ಮಿಣಿ, "ಸಾಧನೆಗೆ ಉಪನ್ಯಾಸಕರ ಮಾರ್ಗದರ್ಶನ ಮತ್ತು ತಂದೆ-ತಾಯಿ ಹಾಗೂ ಕುಟುಂಬಸ್ಥರ ಸಹಕಾರವೇ ಕಾರಣ. ವಿವಿಯಲ್ಲಿನ ಗ್ರಂಥಾಲಯಗಳು ನನ್ನ ನೆರವಿಗೆ ಬಂತು. ಬಿ.ಎಡ್. ಕೂಡಾ ಮಾಡಿದ್ದರಿಂದ ಈಗಾಗಲೇ ಶಿಕ್ಷಕಿ ಹುದ್ದೆಗೆ ಆಯ್ಕೆಯಾಗಿದ್ದು, ಇನ್ನಷ್ಟೇ ನೇಮಕಾತಿ ಪತ್ರ ಬರಬೇಕಿದೆ. ಶಿಕ್ಷಕ ವೃತ್ತಿಯಲ್ಲಿ ಮುಂದೆ ಸಾಗುವೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಾಣಿಶಾಸ್ತ್ರ ವಿಭಾಗದಲ್ಲಿ 9 ಚಿನ್ನದ ಪದಕ ಪಡೆದ ಬೀದರ್ ಮೂಲದ ಆದಿತಿ ರೆಡ್ಡಿ ಮಾತನಾಡಿ, ಪಿಹೆಚ್ಡಿ ಮಾಡುವುದಾಗಿ ತಿಳಿಸಿದರು. ಸೂಕ್ಷ್ಮ ಜೀವವಿಜ್ಞಾನ ವಿಭಾಗದಲ್ಲಿ 7 ಚಿನ್ನದ ಪದಕ ಪಡೆದ ಸುರಪೂರ ಮೂಲದ ಬಿ.ರಾಜಶ್ರೀ ಮಾತನಾಡಿ, ತಮ್ಮ ಈ ಸಾಧನೆಗೆ ತಂದೆ-ತಾಯಿ ಹಾಗೂ ತಮ್ಮ ಅಜ್ಜನಿಗೆ ಅರ್ಪಿಸುವೆ. ಉಪನ್ಯಾಸಕ ವೃತ್ತಿಯಲ್ಲಿ ಮುಂದುವರೆಯುವೆ ಎಂದರು.
ಶಿಲ್ಪಕಲಾ ಕ್ಷೇತ್ರದಲ್ಲಿ ಗಣನೀಯ ಸೇವೆಗೆ ಕಲಬುರಗಿ ಜಿಲ್ಲೆಯ ನಾಡೋಜ ಮಾನಯ್ಯ ಬಡಿಗೇರ್, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಸಾಧನೆಗೆ ತಾತ್ಯಾರಾವ ಕಾಂಬ್ಳೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧನೆಗೆ ಬೆಂಗಳೂರು ಮೂಲದ ಎನ್.ಎಸ್.ಶ್ರೀನಾಥ ಅವರಿಗೆ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಮುಖ್ಯ ಅತಿಥಿಗಳು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.