ರಾಯಚೂರು: ಟಿಪ್ಪು ವಿಚಾರದಲ್ಲಿ ನಮ್ಮ ಪಕ್ಷದ ನಿಲುವು ಸ್ಪಷ್ಟ. ವೋಟಿಗಾಗಿ ಕೆಂಪೇಗೌಡ ಮತ್ತು ಟಿಪ್ಪು ಜೊತೆ ತುಲನೆ ಮಾಡುವುದು ಅಕ್ಷಮ್ಯ ಅಪರಾಧ. ಯಾವುದೇ ಕಾರಣಕ್ಕೂ ಈ ರೀತಿಯ ತಪ್ಪು ಮಾಡಬಾರದು. ಹಾಗೊಂದು ವೇಳೆ ಕಾಂಗ್ರೆಸ್ ಈ ತಪ್ಪು ಮಾಡಿದ್ದಲ್ಲಿ ರಾಜ್ಯದಲ್ಲಿ ಅವರು ಅಡ್ರೆಸ್ ಇಲ್ಲದೆ ಹೋಗುವ ದುಸ್ಥಿತಿ ಬರಬಹುದು. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್, ಪ್ರಾದೇಶಿಕ ಪಕ್ಷಕ್ಕಿಂತಲ್ಲೂ ಕಡೆ ಆಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಶ್ರೀಶೈಲ ಜಗದ್ಗುರು ದ್ವಾದಶ ಪೀಠಾರೋಹಣ ಮಹೋತ್ಸವದ ನಿಮಿತ್ತ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಕೆಲಸಗಳು ಆಗದೇ ಇದ್ದಾಗ ಆತಂಕ ಶುರುವಾಗುವುದು ಸಹಜ. ಅದೇ ರೀತಿ ಸಿದ್ಧರಾಮಯ್ಯನವರಿಗೂ ಆಗಿದೆ. ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಂಡಿದೆ ಎಂದು ಟೀಕಿಸಿದರು.