ರಾಯಚೂರು: ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿಗೆ ಆಗ್ರಹಿಸಿ ಕಾಗಿನೆಲೆಯ ಜಗದ್ಗುರುಗಳ ನೇತೃತ್ವದಲ್ಲಿ ಜನಜಾಗೃತಿ ಆರಂಭವಾಗಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಜಿಲ್ಲೆಯ ಸಿಂಧನೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕಲಬುರಗಿ ವಿಭಾಗ ಮಟ್ಟದ ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿಗಾಗಿ ಆಗ್ರಹಿಸಿ ನಡೆಯುತ್ತಿರುವ ಸಮಾವೇಶದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
ಜನ ಪ್ರತಿನಿಧಿಗಳು, ಮಹಿಳೆಯರು, ಸಮಾಜದ ಒಡೆಯರ್ ಹಾಗೂ ವಿಭಾಗೀಯ ಮಟ್ಟದ ಸಮಾವೇಶಗಳು ನಡೆದಿವೆ. 6ಕ್ಕೆ ದಾವಣಗೆರೆ, 7ಕ್ಕೆ ಶಿಕಾರಿಪುರದಲ್ಲಿ ಸಮಾವೇಶಗಳನ್ನ ಏರ್ಪಡಿಸಲಾಗಿದೆ. ಬರುವ 14ರಿಂದ ಕಾಗಿನೆಲೆಯಿಂದ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ಆಯೋಜಿಸಲಾಗಿದ್ದು, ನಿರೀಕ್ಷೆಗೂ ಮೀರಿ ಜನ ಸೇರುತ್ತಾರೆ. ಕೇಂದ್ರದ ಸಚಿವರನ್ನ ಭೇಟಿ ಮಾಡಿ ಬಂದಿದ್ದೇವೆ. ಕುಲಶಾಸ್ತ್ರ ಅಧ್ಯಯನ ನಡೆಯುತ್ತಿದ್ದು, ವರದಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿವೆ ಎಂದರು.