ರಾಯಚೂರು: ತುಂಗಾತೀರದಲ್ಲಿ ನೆಲೆಸಿರುವ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ನಡೆಯುತ್ತಿದೆ. ಆರಾಧನಾ ಮಹೋತ್ಸವದ ನಾಲ್ಕನೆ ದಿನವಾದ ಇಂದು ರಾಯರ ಮಧ್ಯಾರಾಧನೆ ಉತ್ಸವ ನಡೆಯುತ್ತಿದ್ದು, ಶ್ರೀಮಠದಲ್ಲಿ ಸಂಭ್ರಮ ಮನೆ ಮಾಡಿದೆ.
ಮಂತ್ರಾಲಯ ಶ್ರೀ ಗುರು ರಾಘವೇಂದ್ರ ರಾಯರ ಮಧ್ಯಾರಾಧನೆ ಸಂಪನ್ನ ಭಕ್ತರ ಆರಾಧ್ಯದೈವ, ಕಲಿಯುಗದ ಕಾಮಧೇನು, ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ಪ್ರಮುಖ ಅರ್ಚಕರು ಬೆಳಗ್ಗೆಯೇ ರಾಯರ ಮೂಲ ಬೃಂದಾವನಕ್ಕೆ ವಿಶೇಷವಾದ ಪೂಜೆ - ಪುನಸ್ಕಾರಗಳನ್ನು ನೆರವೇರಿಸಿದರು. ಬಳಿಕ ಮಧ್ಯಾರಾಧನೆಯನ್ನು ನಡೆಸಲಾಯಿತು. ಇಂದು ತಿರುಪತಿ ತಿರುಮಲ ದೇವಾಲಯದಿಂದ ಸಹಾಯಕ ನಿರ್ವಾಹಕ ಅಧಿಕಾರಿ ಧರ್ಮಾರೆಡ್ಡಿ ನೇತೃತ್ವದಲ್ಲಿ ಬಂದ ಶೇಷ ವಸ್ತ್ರವನ್ನು ಶ್ರೀಮಠದ ಪೀಠಾಧಿಪತಿ ಸುಭುದೇಂಧ್ರ ತೀರ್ಥರು ಸ್ವೀಕರಿಸಿ, ರಾಯರಿಗೆ ಸಮರ್ಪಿಸಿದ್ರು. ನಂತರ ಶ್ರೀಗಳು ಭಕ್ತರಿಗೆ ಆರ್ಶೀರ್ವಚನ ನೀಡಿ, ಟಿಟಿಡಿ ಅಧಿಕಾರಿಗಳಿಗೆ ಸನ್ಮಾನಿಸಿ, ಗೌರವಿಸಿದರು.
ಶೇಷ ವಸ್ತ್ರ ಸಮರ್ಪಣೆ ಬಳಿಕ ಪೀಠಾಧಿಪತಿ ಶ್ರೀ ಸುಭುದೇಂಧ್ರ ತೀರ್ಥರು ರಾಯರ ಮೂಲ ಬೃಂದಾವನಕ್ಕೆ ನಾನಾ ಬಗೆಯ ಹಣ್ಣು - ಹಂಪಲು, ಡ್ರೈಪ್ರೂರ್ಟ್ಸ್, ತುಪ್ಪ, ಜೇನು ತುಪ್ಪದಿಂದ ಪಂಚಾಮೃತ ಅಭಿಷೇಕವನ್ನ ನೆರವೇರಿಸಿದರು. ಆರ್ಚಾಯರಿಂದ ಮಂತ್ರಘೋಷಗಳು ಮೊಳಗಿದವು. ಅಭಿಷೇಕದ ಬಳಿಕ ಮಠದ ಪ್ರಕಾರದಲ್ಲಿ ವಾದ್ಯಗಳ ಮೇಳ, ಛತ್ರಿ, ಚಮರ, ಭಕ್ತರ ಝೇಂಕಾರದ ನಡುವೆ ರಥೋತ್ಸವ ಜರುಗಿತು.
ಚಿನ್ನದ ರಥೋತ್ಸವದ ಬಳಿಕ ಶ್ರೀಗಳು ಮೂಲ ರಾಮದೇವರ ಪೂಜೆಯನ್ನ ನೇರವೇರಿಸಿದ್ರು. ರಾಯರು ಬೃಂದಾವನದಲ್ಲಿ ಬೃಂದಾನವಸ್ಥರಾಗಿ ಇಂದಿಗೆ 350 ವರ್ಷಗಳು ಕಳೆದಿವೆ. ರಾಯರು ಬೃಂದಾವನಸ್ಥರಾದ ಈ ದಿನವನ್ನ ರಾಯರ ಮಧ್ಯಾರಾಧನೆ ದಿನವನ್ನಾಗಿ ಆಚರಿಸಲಾಗುತ್ತಿದೆ. ಭಕ್ತರು ಸಹ ತಮ್ಮ ಇಷ್ಟಾರ್ಥ ಈಡೇರಿಸಿದ ರಾಯರಿಗೆ ದೇಣಿಗೆ ಸರ್ಮಪಿಸುತ್ತಾರೆ. ಆರಾಧನಾಗಾಗಿ ದೇಶದ ನಾನಾ ಮೂಲೆಗಳಿಂದ ಭಕ್ತರು ಆಗಮಿಸಿ, ದೀರ್ಘದಂಡ ನಮಸ್ಕಾರ, ಉರುಳು ಸೇವೆ, ಭಜನೆ ಸೇವೆ ಮಾಡುವ ಮೂಲಕ ಭಕ್ತಿ ಭಾವ ಸಮರ್ಪಿಸುತ್ತಿದ್ದರು. ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ್ರು.
ಕೊರೊನಾ ಮೂರನೇ ಅಲೆ ಭೀತಿ ನಡುವೆ ರಾಯರ 350ನೇ ಆರಾಧನಾ ಮಹೋತ್ಸವದ ನಾಲ್ಕನೆಯ ಮಧ್ಯಾರಾಧನೆ ನಡೆಯಿತು. ಅಭಿಷೇಕದ ಬಳಿಕ ರಾಯರ ಮೂಲ ಬೃಂದಾವನಕ್ಕೆ ವಿಶೇಷವಾಗಿ ಪುಷ್ಪಾಂಲಕಾರ ಮಾಡಲಾಗಿತ್ತು. ಆರಾಧನಾ ವೇಳೆ ಭಕ್ತರಿಗೆ ಕೋವಿಡ್ ನಿಯಮ ಪಾಲನೆ ಮುನ್ಸೂಚನೆ ನೀಡಲಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು.