ರಾಯಚೂರು:ಮಂತ್ರಾಲಯದ ಶ್ರೀಗುರು ಶ್ರೀರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವವು ವೈಭವದಿಂದ ನಡೆಯಲಿದೆ ಎಂದು ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ. ಶ್ರೀಮಠದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.29ರಿಂದ ಸೆ.4ರವರೆಗೆ ಏಳು ದಿನ ಮಹೋತ್ಸವ ನಡೆಸಲಾಗುತ್ತದೆ ಎಂದರು.
ಏಳು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಸಮಾರಂಭಗಳು ನಡೆಯಲಿವೆ. ಗ್ರಂಥಗಳ ಲೋಕಾರ್ಪಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಶ್ರೀರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆ.29ರಂದು ಧ್ವಜಾರೋಹಣ, ಗೋ, ಧಾನ್ಯ, ಲಕ್ಷ್ಮಿ ಪೂಜೆ ಮೂಲಕ ಮಹೋತ್ಸವಕ್ಕೆ ವಿಜೃಂಭಣೆಯ ಚಾಲನೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪೂರ್ವಾರಾಧನೆ: ಆ.31ರಂದು ಪೂರ್ವಾರಾಧನೆಯ ನಿಮಿತ್ತ ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಮೂಲ ರಾಮದೇವರ ಪೂಜೆ ನಡೆಯಲಿದೆ. ಸಾಯಂಕಾಲ ಮಠದ ಮುಂಭಾಗದ ಯೋಗೀಂದ್ರ ಸಭಾ ಮಂಟಪದಲ್ಲಿ ಕರ್ನಾಟಕದ ವಿದ್ವಾನ್ ರಾಮ ವಿಠ್ಠಲಾಚಾರ್ಯ, ಆಂಧ್ರದ ವಿದ್ವಾನ್ ಗರಕಿಪಾಟಿ ನರಸಿಂಹರಾವ್, ಮುಂಬೈನ ಉದ್ಯಮಿ ಎನ್.ಚಂದ್ರಶೇಖರನ್, ಪುಣೆಯ ಎಂಐಟಿ ವರ್ಲ್ಡ್ ಪೀಸ್ ವಿವಿಯ ಅಧ್ಯಕ್ಷ ಡಾ.ವಿಶ್ವನಾಥ ಕರಾಡ್‌ಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ನೀಡಿ ಸನ್ಮಾನಿಸಿ, ಗೌರವಿಸಲಾಗುವುದು ಎಂದು ತಿಳಿಸಿದರು.
ಮಧ್ಯಾರಾಧನೆ: ಸೆ.1ರಂದು ಮಧ್ಯಾರಾಧನೆ ನಿಮಿತ್ತ ತಿರುಪತಿ ತಿರುಮಲ ದೇವಸ್ಥಾನದಿಂದ ತರುವ ಶೇಷ ವಸ್ತ್ರವನ್ನು ರಾಘವೇಂದ್ರ ಸ್ವಾಮಿಗೆ ಸಮರ್ಪಣೆ ಮಾಡಲಾಗುತ್ತದೆ.