ರಾಯಚೂರು:ರಾಜ್ಯದಲ್ಲಿ ಖಾಲಿ ಇರುವ ಒಟ್ಟು 1,500 ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಭರ್ತಿ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದು, ಕ್ಯಾಬಿನೆಟ್ ಒಪ್ಪಿಗೆ ಸಿಗಬೇಕಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ರಾಯಚೂರಿನಲ್ಲಿ ಕಂದಾಯ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫೆಬ್ರವರಿ ತಿಂಗಳಲ್ಲಿ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ ಕೊಡುತ್ತೇವೆ. ರಾಜ್ಯದಲ್ಲಿ 357 ಸರ್ವೆಯರ್ ಹುದ್ದೆ ಭರ್ತಿ ಮಾಡಲಾಗುವುದು. 590 ಹುದ್ದೆ ಭರ್ತಿಗೆ ಇನ್ನೂ ಒಂದು ತಿಂಗಳಲ್ಲಿ ಅನುಮೋದನೆ ನೀಡಲಾಗುವುದು. 750 ಜನ ಲೈಸೆನ್ಸಡ್ ಸರ್ವೆಯರ್ಸ್ ಗೆ ತರಬೇತಿ ಕೊಟ್ಟಿದ್ದು, ಅವರು ಕೂಡ ಕಾರ್ಯಾರಂಭಿಸುತ್ತಾರೆ ಎಂದು ತಿಳಿಸಿದರು.
ಒಂದು ವಾರದಲ್ಲಿ ಬರ ಪರಿಹಾರದ ಮೊದಲ ಕಂತಿನ ಹಣ ಪಾವತಿಯಾಗಲಿದೆ. ಹಿಂದೆ ಬರ ಪರಿಹಾರ, ಅತಿವೃಷ್ಟಿ ಪರಿಹಾರ ನೀಡುವಲ್ಲಿ ಸಾಕಷ್ಟು ನ್ಯೂನ್ಯತೆಗಳಿದ್ದವು. ಬೆಳೆ ಬೆಳೆಯದವರಿಗೂ ಪರಿಹಾರ ಸಿಗುತ್ತಿತ್ತು. ಬೆಳೆ ಹಾನಿಯಾದವರಿಗೆ ಪರಿಹಾರ ಸಿಗುತ್ತಿರಲಿಲ್ಲ. ಯಾರದೋ ಜಮೀನು ಮತ್ತೊಬ್ಬರಿಗೆ ಹಣ ಪಾವತಿಯಾಗಿದೆ. ಅಧಿಕಾರಿಗಳು ಮಾಹಿತಿ ಸೇರಿಸುವಾಗ ತಪ್ಪುಗಳಾಗುತ್ತಿದ್ದವು. ಇದೆಲ್ಲ ಸರಿ ಮಾಡಿ ಬೆಳೆ ಸಮೀಕ್ಷೆ ಆಧಾರದಲ್ಲಿ ಹಣ ಪಾವತಿಯಾಗುತ್ತದೆ. 12 ಲಕ್ಷ ಜನಕ್ಕೆ ಆರ್‌ಬಿಐಗೆ ಪೇಮೆಂಟ್ ಆರ್ಡರ್ ಕಳುಹಿಸಿದ್ದೇವೆ. ಇನ್ನೂ 20 ಲಕ್ಷ ಜನರ ಪೇಮೆಂಟ್ ಆರ್ಡರ್ ಒಂದು ವಾರದಲ್ಲಿ ಕಳುಹಿಸುತ್ತೇವೆ. 25-30 ಲಕ್ಷ ಜನರಿಗೆ ಪರಿಹಾರ ಸಿಗುತ್ತದೆ ಎಂದರು.