ರಾಯಚೂರು : ಸಮಾಜವಾದಿ ಸಿದ್ದಾಂತದ ಸಿದ್ದರಾಮಯ್ಯ ಅವರು ಕಾಂಗ್ರೆಸ್ಸಿಗರಿಗೆ ಬುದ್ಧಿ ಹೇಳುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಸಿಂಧನೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ ಎನ್ನುವಂತಾಗಿದೆ. ಪಕ್ಷದೊಳಗೆ ಅಧ್ಯಕ್ಷರಾಗಲು ಆಂತರಿಕ ಕಚ್ಚಾಟ ಹೆಚ್ಚಾಗಿದೆ.
ಬಿಜೆಪಿಗೆ ಕಾಂಗ್ರೆಸ್ ಎದುರಾಳಿ ಅಲ್ಲ. ಮುಂದಿನ ಎರಡುವರೆ ವರ್ಷ ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿರುತ್ತಾರೆ. ಆದ್ರೆ, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ಶುರುವಾಗಿದೆ ಎಂದರು.
ನಳೀನ್ ಕುಮಾರ್ ಕಟೀಲ್ ಮಾತನಾಡಿದರು ಕಾಂಗ್ರೆಸ್‌ನ ಎಲ್ಲಾ ನಾಯಕರು ಬೇಲ್ ಮೇಲೆ ಹೊರಗಿದ್ದಾರೆ. ಅವರೆಲ್ಲರೂ ಗೂಂಡಾ ರಾಜಕಾರಣ, ಭ್ರಷ್ಟ ರಾಜಕಾರಣ ಮಾಡ್ತಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಪಕ್ಷ 150 ಸ್ಥಾನ ಗೆದ್ದೇ ಗೆಲ್ಲುತ್ತೆ. ಹಾಗಾಗಿ ನಮ್ಮ ಸಂಘಟನೆಯನ್ನ ಪ್ರತಿ ಜಿಲ್ಲೆಗೆ ವಿಸ್ತರಣೆ ಮಾಡ್ತಿದ್ದೇವೆ. ವಿಜಯಿ ಯಾತ್ರೆಯನ್ನ ಮಾಡಲು ನಾವಿಲ್ಲಿ ಸೇರಿಕೊಂಡಿದ್ದೇವೆ.
ಮುಂದಿನ ವಿಧಾನಸಭಾ ಕ್ಷೇತ್ರಗಳಾದ ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿಯೂ ನಾವು ಗೆಲ್ಲಲಿದ್ದೇವೆ. ಮಸ್ಕಿಯಲ್ಕಿ ಕೇಸರಿ ಧ್ವಜ ಸಂಕಲ್ಪ ಮಾಡಲಿದ್ದೇವೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿಯೂ ನಾವು ವಿಜಯಿಶಾಲಿಗಳಾಗಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಒಂದೇ ಒಂದು ಬಾರಿ ನಾವು ಶಿರಾ ಗೆದ್ದಿರಲಿಲ್ಲ. ರವಿಕುಮಾರ್ ಹಾಗೂ ವಿಜಯೇಂದ್ರ ಅವರ ನೇತೃತ್ವದಲ್ಲಿ ನಾವು ವಿಜಯಿಯಾತ್ರೆ ಮಾಡಿದ್ದೇವೆ. ಲಿಂಬಾವಳಿ ಹಾಗೂ ಅಶೋಕ್ ಅವರ ನೇತೃತ್ವದಲ್ಲಿ ಆರ್ ಆರ್ ನಗರ ಗೆಲುವು ಸಾಧಿಸಿದೆ. ವಿಧಾನಪರಿಷತ್ ನ ನಾಲ್ಕೂ ಸ್ಥಾನಗಳಲ್ಲಿ ನಾವು ಜಯಶಾಲಿಗಳಾಗಿದ್ದೇವೆ.
ಈ ಸಭೆ ಮುಂದಿನ ಚುನಾವಣೆಯ ಸಂಕಲ್ಪದ ಸಭೆ. ಹಾಗಾಗಿ ನಾವಿಲ್ಲಿ ಸೇರಿದ್ದೇವೆ. ಸಂಘಟನಾತ್ಮಕವಾಗಿ ನಮ್ಮ ಶಕ್ತಿಯನ್ನ ಹೆಚ್ಚಿಸಿಕೊಳ್ಳಬೇಕಿದೆ. ಈ ಭಾಗವನ್ನ ಕಲ್ಯಾಣ ಕರ್ನಾಟಕವನ್ನಾಗಿ ನಮ್ಮ ಸಿಎಂ ಯಡಿಯೂರಪ್ಪನವರು ಮಾಡಿದ್ದಾರೆ. ನರೇಂದ್ರ ಮೋದಿಯವರ ಹಾಗೂ ಯಡಿಯೂರಪ್ಪನವರ ಆಡಳಿತ ವೈಖರಿಯಿಂದ ನಮಗೆ ಗೆಲುವಾಗ್ತಿದೆ ಎಂದರು.