ರಾಯಚೂರು : ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗದ ರೈತರಿಗೆ ವ್ಯವಸಾಯಕ್ಕೆ ನೀರು ಒದಗಿಸುವಂತೆ ಆಗ್ರಹಿಸಿ ಇಂದು (ಮಂಗಳವಾರ) ಸಿರವಾರ ಪಟ್ಟಣ ಬಂದ್ ಮಾಡಲಾಯಿತು. ಈ ಮೂಲಕ ರೈತರು, ರೈತ ಮುಖಂಡರು ಹಾಗು ರಾಜಕೀಯ ನಾಯಕರು ಪಕ್ಷಾತೀತವಾಗಿ ಹೋರಾಟ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಕ್ತದಲ್ಲಿ ಪತ್ರ ಬರೆದು ನೀರು ಬಿಡುಗಡೆಗೆ ಮನವಿ ಮಾಡಲಾಯಿತು.
ಜಿಲ್ಲೆಯ ಎಡಭಾಗದಲ್ಲಿ ವಿಶಾಲವಾಗಿ ಹರಿಯುತ್ತಿರುವ ತುಂಗಭದ್ರಾ ನದಿ ಜಿಲ್ಲೆಯ ಜೀವನಾಡಿ. ಎಡದಂಡೆ ಕಾಲುವೆ ನೀರಿನಿಂದ ಸುಮಾರು 6 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಆದರೆ ಎಡದಂಡೆ ನಾಲೆಯ ವ್ಯಾಪ್ತಿಗೆ ಬರುವಂತೆ ಕೊನೆಯ (ಕೆಳ) ಭಾಗದ ಕಾಲುವೆಗೆ ನೀರು ಹರಿಯದೇ ಇರುವುದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ.
ಜಿಲ್ಲೆಯ ಮಾನವಿ, ಸಿರವಾರ ಹಾಗೂ ರಾಯಚೂರು ತಾಲೂಕಿನಲ್ಲಿ ಹಾದುಹೋಗಿರುವ ತುಂಗಭದ್ರಾ ಎಡದಂಡೆ ನಾಲೆಯ ಡಿಸ್ಟ್ರಿಬ್ಯೂಟರ್ 76, 79, 80 ಸೇರಿದಂತೆ ಸಿರವಾರ ನೀರಾವರಿ ವಲಯದ ಡಿವಿಜನ್‌ಗೆ ಈಗಾಗಲೇ ತುಂಗಭದ್ರಾ ನೀರಾವರಿ ಸಲಹಾ ಸಮಿತಿಯ ತೀರ್ಮಾನದಂತೆ ನೀರು ಹರಿಸಲಾಗಿದೆ. ನೀರು ಬಿಟ್ಟು 23 ದಿನಗಳು ಕಳೆದರೂ ಸಹ ಇದುವರೆಗೆ ಕೆಳಭಾಗಕ್ಕೆ ನೀರು ಹರಿದು ಬಂದಿಲ್ಲ. ಇದರಿಂದಾಗಿ ಇದೇ ನೀರು ನಂಬಿಕೊಂಡು ಭತ್ತ ನಾಟಿ ಮಾಡುವ ರೈತರ ಬದುಕು ಅತಂತ್ರಗೊಂಡಿದೆ. ಕೂಡಲೇ ಕೆಳ ಭಾಗದ ರೈತರಿಗೆ ನೀರು ಹರಿಸುವಂತೆ ರಾಜ್ಯ ರೈತ ಸಂಘದ ಮುಖಂಡ ಚಾಮರಸ ಮಾಲೀಪಾಟೀಲ್ ಆಗ್ರಹಿಸಿದ್ದಾರೆ.