ರಾಯಚೂರು:ಬಿಸಿಲೂರು ಎಂದೇ ಖ್ಯಾತಿ ಪಡೆದ ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ಹಸಿರೀಕರಣ ಪ್ರಜ್ಞೆ ಹೆಚ್ಚುತ್ತಿದೆ. ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಹಲವು ಸಂಘ-ಸಂಸ್ಥೆಗಳು ಈಗಾಗಲೇ ಸಾವಿರಾರು ಗಿಡಗಳನ್ನು ನೆಡುವ ಮೂಲಕ ಹಸಿರು ಕ್ರಾಂತಿಗೆ ಮುಂದಾಗಿದ್ದು, ಒಂದೆರಡು ವರ್ಷಗಳಲ್ಲಿ ಇಲ್ಲಿನ ವಾತಾವರಣ ಬದಲಾಗಬಹುದು ಎನ್ನುವಂತಿದೆ.
ಬೇಸಿಗೆ ಬಂದರೆ ಈ ಭಾಗದಲ್ಲಿ ನೆರಳು ಸಿಗುವುದಿಲ್ಲ. ಮಧ್ಯಾಹ್ನದ ಹೊತ್ತು ಜನ ಹೊರಗೆ ಬರುವುದು ಕೂಡ ವಿರಳ ಎನ್ನುವಂತಿರುತ್ತದೆ. ಇಂಥ ಸನ್ನಿವೇಶ ಮನಗಂಡ ಸಿಂಧನೂರಿನ ಸಂಘಟನೆಯೊಂದು ಹಸಿರು ತೋರಣ ಎಂಬ ಕಾರ್ಯಕ್ರಮದಡಿ ಸುಮಾರು 3 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು ಹಸೀರಿಕರಣಕ್ಕೆ ಮುಂದಾಗಿದೆ. ನಗರದ ದುದ್ದುಪುಡಿ ಮಹಿಳಾ ಕಾಲೇಜ್, ಎನ್ಎಸ್ಎಸ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಹಸಿರು ಕ್ರಾಂತಿಗೆ ಮುಂದಾದ ಸಿಂಧನೂರು ನಗರದ ಪ್ರಮುಖ ರಸ್ತೆಯುದ್ದಕ್ಕೂ ಗಿಡಗಳನ್ನು ನೆಡಲಾಗಿದೆ. ಮುಖ್ಯವಾಗಿ ರಾಯಚೂರು ರಸ್ತೆ, ಕುಷ್ಟಗಿ ರಸ್ತೆ, ಗಂಗಾವತಿ ರಸ್ತೆಯಲ್ಲಿ ಸುಮಾರು1500 ಗಿಡಗಳನ್ನು ನೆಡಲಾಗಿದೆ. ಇನ್ನು ಗೆಳೆಯರ ಬಳಗದಿಂದ ನಗರದ ವಿವಿಧ ಬಡಾವಣೆಗಳಲ್ಲಿ 2 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡಲಾಗಿದೆ.
ಇನ್ನು ಎಲ್ಲಾ ಗಿಡಗಳನ್ನು ಆಂಧ್ರದ ಕಡಿಯಂನಿಂದ ತರಲಾಗಿದೆ. ಒಂದು ಗಿಡಕ್ಕೆ 300 ರೂ. ಕೊಟ್ಟು ಖರೀದಿ ಮಾಡಲಾಗಿದೆ. ಸಣ್ಣ ಸಸಿಗಳಾದರೆ ಇಲ್ಲಿನ ಉಷ್ಣತೆಗೆ ಉಳಿಯುವುದು ಕಷ್ಟವಾಗಲಿದೆ ಎಂಬ ಕಾರಣಕ್ಕೆ 2-3 ವರ್ಷದ ದೊಡ್ಡ ಗಾತ್ರದ ಗಿಡಗಳನ್ನು ದುಬಾರಿ ಹಣ ನೀಡಿ ತರಲಾಗಿದೆ. ಒಂದೇ ತಳಿಯ ಗಿಡಗಳನ್ನು ನೆಟ್ಟಿರುವ ಕಾರಣ ಎರಡು ವರ್ಷದಲ್ಲಿ ಹಳದಿ ಬಣ್ಣದ ಹೂಗಳನ್ನು ಬಿಡಲಿದೆ. ಇದರಿಂದ ರಸ್ತೆಯ ಅಂದ ಕೂಡ ಹೆಚ್ಚಾಗಿ ಮುಂಬರುವ ದಿನಗಳಲ್ಲಿ ಸಿಂಧನೂರು ನಗರ ಹಸಿರಿನಿಂದ ಕಂಗೊಳಿಸಲಿದೆ.