ರಾಯಚೂರು: ಸಾಮಾನ್ಯವಾಗಿ ಹಿಂದೂ ಧರ್ಮದ ಆಚರಣೆಯಲ್ಲಿ ಮುತ್ತೈದೆಯರಿಗೆ ಉಡಿ ತುಂಬುವುದನ್ನು ಕಾಣುತ್ತೇವೆ. ಆದರೆ, ರಾಯಚೂರು ಜಿಲ್ಲೆಯಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಉಡಿ ತುಂಬುವ ಮೂಲಕ ಭಾವೈಕ್ಯತೆ ಮೆರೆಯಲಾಯಿತು.
ಜಿಲ್ಲೆಯ ಸಿಂಧನೂರು ತಾಲೂಕಿನ ರವುಡಕುಂದಾ ಗ್ರಾಮದ ಬಳಿ ಬರುವ ಬಂಗಾರಿ ಕ್ಯಾಂಪಿನ ಶ್ರೀಸಿದ್ಧಾಶ್ರಮದ ಶ್ರೀಗಣೇಶ, ಗಾಯಿತ್ರಿ ದೇವಿಯ ರಥೋತ್ಸವ ಹಾಗೂ ಆಧ್ಯಾತ್ಮಿಕ ಪ್ರವಚನ ಕಾರ್ಯಮದ ನಿಮಿತ್ತವಾಗಿ 2,551 ಮುತ್ತೈದೆಯರಿಗೆ ಉಡಿ ತುಂಬುವ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿಂದೂ ಮಹಿಳೆಯರಿಗೆ ಉಡಿ ತುಂಬುವುದಷ್ಟೇ ಅಲ್ಲದೆ, ಮುಸ್ಲಿಂ ಸಮುದಾಯದ ಮಹಿಳೆಯರಿಗೂ ಸಹ ಉಡಿತುಂಬುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಲಾಯಿತು.
"ಮೊದಲು ಎಲ್ಲಾ ಮಹಿಳೆಯರಿಗೂ ಶ್ರೀಸಿದ್ಧಾಶ್ರಮದಿಂದ ಸೀರೆಯನ್ನು ನೀಡಲಾಯಿತು. ಸೀರೆ ಧರಿಸಿದ ಬಳಿಕ ಅಕ್ಕಿ, ಅರಿಶಿಣ, ಕುಂಕುಮ, ಒಣ ಕೊಬ್ಬರಿ, ಬಟ್ಟಲು, ಉತ್ತತ್ತಿ, ಅಡಿಕೆ ಸೇರಿದಂತೆ ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಅಲ್ಲದೇ, ಸಿದ್ಧಾಶ್ರಮದ ಸ್ವಾಮೀಜಿಗಳಿಗೆ ಜಾತಿ, ಮತ ಧರ್ಮ ಎನ್ನುವ ಭೇದವಿಲ್ಲ. ಎಲ್ಲರೂ ಒಂದೇ ಎನ್ನುವ ಬುದ್ಧಿ ಮಾತನ್ನು ಹೇಳುವ ಮೂಲಕ ಉತ್ತಮ ಮಾರ್ಗವನ್ನು ತೋರಿಸುತ್ತಿದ್ದಾರೆ" ಎಂದು ಉಡಿ ತುಂಬಿಸಿಕೊಂಡ ಮುಸ್ಲಿಂ ಮಹಿಳೆ ಮೌಲಾಬಿ ತಮ್ಮ ಸಂತಸ ಹಂಚಿಕೊಂಡರು.